ವರದಿ: ರಹೀಂ ಉಜಿರೆ
ಬ್ರಹ್ಮಾವರ: ಉಡುಪಿ ಜಿಲ್ಲೆಯ ಭತ್ತ ಬೆಳೆಗಾರರು ಚಳುವಳಿಗೆ ಧುಮುಕಿದ್ದಾರೆ. ರೈತರು ತಾವೇ ನಿಗದಿ ಪಡಿಸಿದ ದರದಲ್ಲಿ ಭತ್ತ ಖರೀದಿ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದರು. ನಿನ್ನೆ ಗಡುವು ಮುಗಿದ ಹಿನ್ನೆಲೆಯಲ್ಲಿ ಇವತ್ತು ರೈತರು ಹೆದ್ದಾರಿ ತಡೆ ಮಾಡಿ, ಹೆದ್ದಾರಿಯಲ್ಲೇ ಭತ್ತ ಬಡಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಹೋರಾಟ ಎಂದಾಕ್ಷಣ ಉತ್ತರ ಕರ್ನಾಟಕದ ರೈತರ ಚಿತ್ರಣವೇ ಕಣ್ಣಮುಂದೆ ಬರುತ್ತದೆ. ಕಾರಣ, ಕರಾವಳಿ ರೈತರು ಸಂಘಟಿತ ಹೋರಾಟ ಮಾಡಿದ್ದೇ ಕಡಿಮೆ. ಈ ಅಪವಾದದಿಂದ ಹೊರ ಬರಲು ಉಡುಪಿಯ ಭತ್ತ ಕೃಷಿಕರು ಚಳುವಳಿಯ ಕಿಚ್ಚು ಹಚ್ಚಿದ್ದಾರೆ. ಇಂದು ಬ್ರಹ್ಮಾವರದಲ್ಲಿ ನಡೆದ ಹೆದ್ದಾರಿ ತಡೆಯೇ ಇದಕ್ಕೆ ಸಾಕ್ಷಿ . ಭತ್ತಕ್ಕೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿದ ಸಾವಿರಾರು ಕೃಷಿಕರು ಹೆದ್ದಾರಿ ತಡೆ ಮಾಡಿ ಶಕ್ತಿ ಪ್ರದರ್ಶನ ಮಾಡಿದರು.ಹೆದ್ದಾರಿ ಮಧ್ಯೆಯೇ ಭತ್ತ ಕುಟ್ಟುವ ಮಂಚ ಇಟ್ಟು ಅಲ್ಲೇ ಭತ್ತ ಬೇರ್ಪಡಿಸಿ ಸರಕಾರಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಭತ್ತ ಪ್ರತಿ ಕ್ವಿಂಟಾಲಿಗೆ 2500 ರೂ. ನೀಡಲೇಬೇಕು ಎಂದು ನಿರ್ಧರಿಸಿದ್ದಾರೆ. ಸದ್ಯ ಕೆಜಿಗೆ ಕೇವಲ 16 -17 ರೂ. ದರವಿದೆ. ಈ ಮೊತ್ತದಲ್ಲಿ ಏರಿಕೆ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ರೈತರು 4 ದಿನಗಳ ಗಡುವು ನೀಡಿದ್ದರು. ಈ ಮಧ್ಯೆ 2 ದಿನಗಳ ಹಿಂದೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಮನವಿ ಸಲ್ಲಿಸಿದ್ದರು. ಆದರೆ, ಸರಕಾರ ಈ ತನಕ ಬೇಡಿಕೆಗೆ ಸ್ಪಂದಿಸದ ಕಾರಣ ಜಿಲ್ಲೆ ರೈತರು ಒಗ್ಗಟ್ಟಾಗಿ ಹೋರಾಟಕ್ಕೆ ಧುಮುಕಿದ್ದಾರೆ.
ಸರಕಾರ ಕರಾವಳಿ ಜಿಲ್ಲೆಗಳ ಕೃಷಿ ಚಟುವಟಿಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇಲ್ಲಿನ ಭಿನ್ನ ಭೌಗೋಳಿಕ ಅಂಶ ಗಮನಿಸಿ, ಪ್ರತ್ಯೇಕ ಕೃಷಿ ನೀತಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನೂ ರೈತರು ಮುಂದಿಟ್ಟಿದ್ದಾರೆ. ಒಟ್ಟಾರೆ ರೈತ ಚಳುವಳಿಗೆ ಅಸ್ತಿತ್ವವೇ ಇಲ್ಲದ ಕರಾವಳಿಯಲ್ಲಿ ಪಕ್ಷಭೇದ ಮರೆತು ಎಲ್ಲ ರೈತರು ಒಟ್ಟಾಗಿದ್ದು ವಿಶೇಷವೇ ಸರಿ.
Kshetra Samachara
06/11/2021 02:32 pm