ಮುಲ್ಕಿ: ಕೃಷಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಸವಲತ್ತು ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಕೃಷಿಕರು ಉತ್ತಮ ಕೃಷಿಕರಾಗಿ ದೇಶಕ್ಕೆ ಮಾದರಿಯಾಗಬೇಕು ಎಂದು ಜಿಪಂ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.
ಅವರು ಮುಲ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆ ಯಡಿ ವೈಯಕ್ತಿಕ ಫಲಾನುಭವಿ ನೆಲೆಯಲ್ಲಿ ಬಳ್ಕುಂಜೆ ಗ್ರಾಮದ ಕೃಷಿಕ ಶಂಕರ್ ಶೆಟ್ಟಿ ಅವರಿಗೆ ಪವರ್ ಟಿಲ್ಲರ್ ವಿತರಿಸಿ ಮಾತನಾಡಿದರು. ತಾಪಂ ಸದಸ್ಯ ಶರತ್ ಕುಬೆವೂರ್ ಮಾತನಾಡಿ, ಮುಲ್ಕಿ ಹೋಬಳಿಯ ಅತಿಕಾರಿಬೆಟ್ಟು, ಬಳ್ಕುಂಜೆ, ಶಿಮಂತೂರು ಮತ್ತಿತರ ಪ್ರದೇಶಗಳಲ್ಲಿ ಕೃಷಿಯನ್ನೇ ನಂಬಿಕೊಂಡು ಜನ ಬದುಕುತ್ತಿದ್ದು ಸರಕಾರದ ಸವಲತ್ತು ಉಪಯೋಗಿಸಿಕೊಳ್ಳಲು ಮತ್ತಷ್ಟು ಕೃಷಿಕರು ಮುಂದೆ ಬರಬೇಕೆಂದರು.
ಮುಲ್ಕಿ ಹೋಬಳಿಯ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಮಾತನಾಡಿ, ಪವರ್ ಟಿಲ್ಲರ್ ಗೆ ಒಟ್ಟು ಮೌಲ್ಯ 1.70 ಲಕ್ಷ ವಾಗಿದ್ದು ಸರಕಾರದ ಸಹಾಯಧನ 72,500 ರೂ. ಎಂದು ಹೇಳಿದ ಅವರು, ಸರಕಾರದ ಹೊಸ ಯೋಜನೆಗಳನ್ನು ಮತ್ತಷ್ಟು ಅನುಷ್ಠಾನಗೊಳಿಸಬೇಕೆಂದು ಜಿಪಂ ಸದಸ್ಯರನ್ನು ಒತ್ತಾಯಿಸಿದರು. ಮುಖ್ಯ ಅತಿಥಿಗಳಾಗಿ ಬಳಕುಂಜೆ ತಾ. ಪಂ. ಸದಸ್ಯರಾದ ರಶ್ಮಿ ಆಚಾರ್ಯ, ತಾಂತ್ರಿಕ ಸಹಾಯ ವ್ಯವಸ್ಥಾಪಕ ಷಣ್ಮುಗ, ಕೃಷಿಕರಾದ ನವೀನ್ ಚಂದ್ರ ಮೈಲೊಟ್ಟು, ಸುನಿಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಸ್ವಾಗತಿಸಿ, ನಿರೂಪಿಸಿದರು.
Kshetra Samachara
01/10/2020 12:55 pm