ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡ್ಕ ರೈತರ ಸಹಕಾರಿ ಸಂಘವು ಹಿರಿಯಡ್ಕ ವ್ಯಾಪ್ತಿಯ ಏಳು ಗ್ರಾಮಗಳ ಸದಸ್ಯರನ್ನು ಹೊಂದಿದೆ. ಈ ಸಂಘ ಸುಮಾರು 180 ಕೋಟಿಯಷ್ಟು ವ್ಯವಹಾರ ವನ್ನು ಹೊಂದಿದೆ.ಆದರೆ ಸಹಕಾರಿ ಸಂಘದಲ್ಲಿ ಸಹಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ನೇಮಕಾತಿಯಲ್ಲಿ ಮತ್ತು ಸಾಲ ನೀಡಿಕೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘರ್ಷ ಸಮಿತಿ ಮುಖಂಡರು ಹಿರಿಯಡ್ಕ ರೈತರ ಸಹಕಾರಿ ಸಂಘದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ರೈತರಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸಂಘದ ಹೆಸರಿನಲ್ಲಿ ಸ್ವಂತ ಸ್ಥಳ ಇದ್ದರೂ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿಯ ಸರಕಾರಿ ಜಮೀನು ಅತಿಕ್ರಮಣ ಮಾಡಿ ಕುಕ್ಕೆಹಳ್ಳಿ ಗ್ರಾಮಪಂಚಾಯತ್ ನಿಂದ ಕಟ್ಟಡ ಪರವಾನಿಗೆ ಪಡೆದಿದ್ದು ಸುಮಾರು 20 ಲಕ್ಷದಷ್ಟು ವೆಚ್ಚ ಮಾಡಿ ಶಾಖಾ ಕಚೇರಿ ನಿರ್ಮಿಸಲಾಗಿದೆ.
ಸಾಲ ನೀಡಿಕೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಸಾಲ ನೀಡಲಾಗಿದೆ. ಉದಾಹರಣೆಗೆ ಕಿಶನ್ ಹೆಗ್ಡೆ ಕೊಳ್ಕೆಬೈಲು ಇವರ ಹಳೆ ಕಾರನ್ನು ಅಡಮಾನ ಮಾಡಿದೆ 18 ಲಕ್ಷ 65,000 ದಷ್ಟು ವಾಹನ ಸಾಲ ನೀಡಿರುತ್ತಾರೆ. ಇದು ಕೇವಲ ಒಂದು ಉದಾಹರಣೆಯಾಗಿದ್ದು ಬಹಳಷ್ಟು ಮಂದಿಗೆ ಸೂಕ್ತ ದಾಖಲೆ ಇಲ್ಲದೆ ಭದ್ರತೆಯಿಲ್ಲದೆ ಬೇನಾಮಿ ಸಾಲ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪ ಮಾಡಿದೆ.
ಈ ಸಂಘದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಾಲ ಕೇಳಿದರೆ ಸರಕಾರಿ ಅಥವಾ ಉದ್ಯೋಗಸ್ಥರ ಜಾಮೀನು, ಆರ್ಟಿಸಿ ಇತ್ಯಾದಿಗಳನ್ನು ಕೇಳುತ್ತಾರೆ. ಆದರೆ ಪರಿಶಿಷ್ಟೇತರರು ಸಾಲ ಕೇಳಿದರೆ ಯಾವುದೇ ದಾಖಲೆ ಇಲ್ಲದೆ ನೀಡುವುದು ನಮ್ಮ ಗಮನಕ್ಕೆ ಬಂದಿದೆ. ಅಕ್ರಮಗಳ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.
Kshetra Samachara
10/12/2020 12:37 pm