ಮಂಗಳೂರು: ಮಂಗಳೂರಿನ ಉಳ್ಳಾಲದ 5-6 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ತಾಂತ್ರಿಕ ದೋಷಕ್ಕೊಳಗಾಗಿದ್ದ ಸಿರಿಯಾ ದೇಶದ ಎಂವಿ ಪ್ರಿನ್ಸಸ್ ಮಿರಾಲ್ ಹಡಗು ಇಂದು ಮಂಗಳೂರಿನ ಬಟ್ಟಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಗೊಂಡಿದೆ.
ಎರಡು ದಿನಗಳ ಹಿಂದೆ ಸಿರಿಯಾ ದೇಶದ ಈ ಹಡಗು ಚೀನಾ ದೇಶದ ಟಿಯಾಂಜಿನ್ ನಿಂದ ಲೆಬನಾನ್ ಗೆ ಪ್ರಯಾಣ ಬೆಳೆಸುತ್ತಿತ್ತು. ಮಂಗಳೂರಿನ ಸಮುದ್ರ ತೀರದಲ್ಲಿ ಸಾಗುತ್ತಿದ್ದ ವೇಳೆ ಸಣ್ಣ ರಂಧ್ರದ ಮೂಲಕ ನೀರು ಒಳನುಗ್ಗಿ ಅಪಾಯಕ್ಕೆ ಸಿಲುಕಿತ್ತು. ತಕ್ಷಣ ಹಡಗಿನಲ್ಲಿದ್ದ ಸಿರಿಯಾ ದೇಶದ 15 ಮಂದಿ ಪ್ರಜೆಗಳನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು. 8000 ಟನ್ ಉಕ್ಕಿನ ಕಾಯಿಲ್ ಗಳನ್ನು ತುಂಬಿಸಿಕೊಂಡು ಸಾಗುತ್ತಿದ್ದ ಈ ಹಡಗು ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದೆ.
ಹಡಗು ಮುಳುಗಡೆಗೊಂಡ ವಿಚಾರದಲ್ಲಿ ದ.ಕ. ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಡಗಿನಿಂದ OIL SPILL ಆಗದಂತೆ ತಡೆಗಟ್ಟಲು, ಫರ್ನಸ್ ಆಯಿಲ್ ಮತ್ತು ಇಂಜಿನ್ ಆಯಿಲ್ ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ಸೂಚಿಸಲಾಗಿದೆ.
ಅಲ್ಲದೆ ಈ ಹಡಗಿನ ಸುತ್ತಲೂ ಮೀನುಗಾರಿಕೆ ನಡೆಸದಂತೆ ನೋಡಿಕೊಳ್ಳಲು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಕಾಲ ಕಾಲಕ್ಕೆ ಸಮುದ್ರದ ನೀರಿನ ಗುಣಮಾಪನ ಮಾಡಲು ನಿರ್ದೇಶಿಸಲಾಗಿದೆ. ಯಾವುದೇ ರೀತಿಯಲ್ಲಿ oil Spill ಆದಲ್ಲಿ ನದಿಗೆ ಸೇರದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Kshetra Samachara
23/06/2022 10:01 pm