ಪುತ್ತೂರು: ಅತಿ ವೇಗದಿಂದ ಬಸ್ ನಿಲ್ದಾಣದೊಳಗೆ ನುಗ್ಗಿದ ಕೆಎಸ್ಸಾರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಒಂದು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ ಹಾಗೂ ಆಕೆಯ ಒಂದು ವರ್ಷದ ಪುತ್ರ ಶಾಹೀಲ್ ಮೃತಪಟ್ಟವರು. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಇಂದು ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಇದೇ ವೇಳೆ ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಬೂತ್ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಅತಿ ವೇಗದಿಂದ ನಿಲ್ದಾಣದೊಳಗೆ ಬಂದ ಸರಕಾರಿ ಬಸ್, ತಾಯಿ- ಮಗುವಿಗೆ ಡಿಕ್ಕಿ ಹೊಡೆದಿದೆ. ಅವರಿಬ್ಬರ ತಲೆಯ ಮೇಲೆ ಬಸ್ ಹರಿದಿದ್ದು, ತಾಯಿ- ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Kshetra Samachara
12/10/2021 12:35 pm