ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕುದ್ರಿಪದವು ಪ್ರದೇಶದ ಹಾಡಿಯೊಂದರಲ್ಲಿ ಸ್ಥಳೀಯರಾದ ಲೂಯಿಸ್ ಡಿಸೋಜ ಎಂಬವರು ಮೃತಪಟ್ಟಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈಮುನಾ ಫೌಂಡೇಶನ್ ಗೆ ಮುಲ್ಕಿ ಪೊಲೀಸರ ಕರೆ ಮೇರೆಗೆ ಆಪತ್ಪಾಂಧವ ಆಸಿಫ್ ಅವರು ಸ್ಥಳಕ್ಕೆ ಧಾವಿಸಿ ಮೃತ ಶರೀರವನ್ನು ಸ್ಥಳದಿಂದ ತೆಗೆದು ಆಪತ್ಪಾಂಧವ ಆಂಬ್ಯುಲೆನ್ಸ್ ಮೂಲಕ ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.
ಮೃತ ಲೂಯಿಸ್ ಡಿಸೋಜ ಅವರು ಎರಡು ತಿಂಗಳ ಹಿಂದೆ ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಾಶ್ರಿತರಂತೆ ತಿರುಗಾಡುತ್ತಿದ್ದಾಗ ಸ್ಥಳೀಯರು ಕಾರ್ನಾಡು ಮೈಮುನಾ ಫೌಂಡೇಶನ್ ಆಶ್ರಮಕ್ಕೆ ಕರೆ ಮಾಡಿದ್ದರು. ಆಶ್ರಮದ ಸಿಬ್ಬಂದಿ ಅವರನ್ನು ಕರೆತಂದು ಶುಚಿಗೊಳಿಸಿ ಸುಮಾರು ಐದು ದಿವಸಗಳ ಕಾಲ ಆಶ್ರಮದಲ್ಲಿ ಇರಿಸಿದ್ದರು.
ನಂತರ ಮನೆಯವರಿಗೆ ಕರೆ ಮಾಡಿದಾಗ ಮನೆಯವರ ಸ್ಪಂದನೆ ಸಿಗದಿದ್ದರೂ ಅವರನ್ನು ಒತ್ತಾಯಪೂರ್ವಕ ಮನೆಗೆ ಕಳುಹಿಸಿಕೊಡಲಾಯಿತು ಎಂದು ಆಸಿಫ್ ತಿಳಿಸಿದ್ದಾರೆ. ಆದರೆ, ಇಂದು ಮನೆಯ ಹಿಂಬದಿಯ ಹಾಡಿಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ನೋಡುವಂತಾಯಿತು. ಒಂದು ವೇಳೆ ಮನೆಯವರು ಸ್ಪಂದಿಸಿದ್ದರೆ ಲೂಯಿಸ್ ಬದುಕುತ್ತಿದ್ದರು ಎಂದು ಆಪತ್ಪಾಂಧವ ಆಸಿಫ್ ಬೇಸರ ವ್ಯಕ್ತಪಡಿಸಿದ್ದಾರೆ.
Kshetra Samachara
24/12/2020 04:42 pm