ಉಡುಪಿ: ರೈತರ ಕಲ್ಯಾಣಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಕೃಷಿ ಮಸೂದೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 70 ವರ್ಷಗಳಿಂದ ರೈತರು ಎದುರಿಸುತ್ತಿದ್ದ ಶೋಷಣೆ ಮತ್ತು ಅನ್ಯಾಯಗಳಿಗೆ ಮುಕ್ತಿ ನೀಡಿದೆ. ಆ ಮೂಲಕ ಕೃಷಿ ಮಸೂದೆ ರೈರಾಪಿ ವರ್ಗದ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ರೈತರ ಆದಾಯ ದ್ವಿಗುಣಗೊಳಿಸುವ ಸದುದ್ದೇಶದಿಂದ ಕೂಡಿದ ಕೃಷಿ ಮಸೂದೆಯು ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿ, ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಕೃಷಿ ಉತ್ಪನ್ನಗಳ ಮುಕ್ತ ಮಾರಾಟದ ಸ್ವಾತಂತ್ರ್ಯ ಮುಂತಾದ ಸವಲತ್ತುಗಳ ಜೊತೆಗೆ ರೈತರ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಲಿದೆ.
ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳ ಪರವಾಗಿದ್ದ ರೈತ ವಿರೋಧಿ ಪಕ್ಷಗಳು ಈ ರೈತ ಪರ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ಖಂಡನೀಯ.
ದೇಶದ ಬೆನ್ನೆಲುಬಾದ ರೈತಾಪಿ ವರ್ಗಕ್ಕೆ ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ದಿಟ್ಟ ಕ್ರಮ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
24/09/2020 05:00 pm