ಉಡುಪಿ: ತುಳುಕೂಟ ಉಡುಪಿ ಇದರ 2020-2021 ನೇ ಸಾಲಿನ ಎಸ್.ಯು.ಪಣಿಯಾಡಿ ಸ್ಮಾರಕ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅಕ್ಷಯ ಆರ್.ಶೆಟ್ಟಿ ಅವರ ದೆಂಗ ಕಾದಂಬರಿ ಆಯ್ಕೆಯಾಗಿದೆ.
ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ, ತುಳು ಭಾಷೆಯ ಶ್ರೇಷ್ಠ ಸಾಹಿತಿ ದಿ.ಎಸ್.ಯು.ಪಣಿಯಾಡಿ ಅವರ ಸವಿನೆನಪಿಗಾಗಿ ಉಡುಪಿ ತುಳುಕೂಟವು ಕಳೆದ 27 ವರ್ಷಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸುತ್ತಿದೆ. ಈ ಮೂಲಕ ತುಳು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಯುವ ಕಾದಂಬರಿಕಾರರನ್ನು ಪರಿಚಯಿಸಿ, ಪ್ರಶಸ್ತಿ ವಿಜೇತ 33 ತುಳು ಕಾದಂಬರಿಗಳನ್ನು ಪ್ರಕಟಿಸುವ ಮೂಲಕ ತುಳು ಭಾಷಾ ಕೃತಿಗಳ ಬೆಳೆವಣಿಗೆಗೆ ವಿಶೇಷ ಕೊಡುಗೆ ನೀಡಿದೆ.
ಈ ಬಾರಿ ಕಾದಂಬರಿ ಸ್ಪರ್ಧೆಗೆ ಒಟ್ಟು ಏಳು ಹಸ್ತಪ್ರತಿಗಳು ಬಂದಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಜಾನಕಿ ಬ್ರಹ್ಮಾವರ, ಸಕು ಪಾಂಗಾಳ, ಉಪನ್ಯಾಸಕಿ ಡಾ.ನಿಕೇತನ ಸಹಕರಿಸಿದ್ದರು ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
06/01/2022 08:43 pm