ಉಡುಪಿಯ ಮಂದರ್ತಿ ಸಮೀಪ ನಿನ್ನೆ ಪ್ರೇಮಿಗಳಾದ ಯಶವಂತ್ ಯಾದವ್ ಮತ್ತು ಜ್ಯೋತಿ ಆತ್ಮಹತ್ಯೆ ಹಿಂದೆ ಹಲವು ಸಂಶಯಗಳಿವೆ. ಸಾಮಾನ್ಯವಾಗಿ ಕಾರಿನ ಒಳಗೆ ಬೆಂಕಿ ಹಾಕಿಕೊಂಡು ಯಾರೂ ಆತ್ಮಹತ್ಯೆ ಮಾಡುವುದಿಲ್ಲ. ಹೀಗಾಗಿ ಹಲವು ಸಂಶಯಗಳು ಇರುವುದರಿಂದ ನಾವು ಆ ಆಯಾಮಗಳಲ್ಲೂ ತನಿಖೆ ಮಾಡುತ್ತೇವೆ ಎಂದು ಉಡುಪಿ ಎಎಸ್‌ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಕರಣವನ್ನು ಕೊಲೆ ಎಂಬ ಆಯಾಮದಲ್ಲೂ ತನಿಖೆ ಮಾಡುತ್ತೇವೆ. ಮೇಲ್ನೋಟಕ್ಕೆ ಅಸಹಜ ಸಾವಿನಂತೆ ಕಂಡುಬರುತ್ತಿದೆ. ನಾವು ಕೊಲೆ ನಡೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ಮಾಡಬೇಕಾಗುತ್ತದೆ. ಯಶವಂತ್ ಯಾದವ್ ಮೆಸೇಜ್ ಮಾಡಿದ್ದಾನೆಯೇ ಅಥವಾ ಬೇರೆ ಯಾರಾದರೂ ಮೆಸೇಜ್ ಮಾಡಿರಬಹುದೇ ಎಂದು ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದರು.
ಮಂಗಳೂರಿನ ಬಾಡಿಗೆ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಯಶವಂತ್ ಯಾದವ್ ಮರಾಠ ಸಮುದಾಯಕ್ಕೆ ಸೇರಿದವನು. ಯುವತಿ ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರು. ಈ ಕಾರಣಕ್ಕಾಗಿ ಅವರಿಬ್ಬರ ಮದುವೆಗೆ ತೊಂದರೆ ಇದ್ದಿರಬಹುದು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಎರಡು ಕುಟುಂಬಗಳಿಗೂ ಗೊತ್ತಿತ್ತು. ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ ಮದುವೆಗೆ ಹುಡುಗನ ಮನೆಯಲ್ಲಿ ಅಸಮಾಧಾನ ಇತ್ತು. ಯಶವಂತ ಮತ್ತು ಜ್ಯೋತಿಗೆ ಮದುವೆ ಆಗಿರಲಿಲ್ಲ. ಬಾಡಿಗೆ ಮನೆ ಮತ್ತು ಬಾಡಿಗೆ ಕಾರು ಪಡೆದುಕೊಳ್ಳುವಾಗ ತಾವಿಬ್ಬರು ಗಂಡ-ಹೆಂಡತಿ ಎಂದೇ ಹೇಳಿಕೊಂಡಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಧೈರ್ಯ ಕಳೆದುಕೊಂಡು ಹೀಗೆ ಮಾಡಿಕೊಂಡಿರಲೂಬಹುದು ಎಂದು ಎಎಸ್‌ಪಿ ಹೇಳಿದ್ದಾರೆ.
PublicNext
23/05/2022 03:32 pm