ಉಡುಪಿ: ರಾಜ್ಯ ಸರ್ಕಾರವು ಬೆಳೆ ಹಾನಿಗೆ ಬಿಡಿಗಾಸು ಪರಿಹಾರ ನೀಡಿ ಮೊಸಳೆ ಕಣ್ಣೀರು ಸುರಿಸುವ ಬದಲು ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ಮಾದರಿಯಲ್ಲಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಅತಿವೃಷ್ಟಿಯಿಂದಾಗಿ ರಾಜ್ಯಾದ್ಯಂತ 10 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಆಗಿದ್ದು, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರವು ಹೆಕ್ಟೇರ್ ನೀರಾವರಿ ಜಮೀನಿಗೆ 13,500 ರೂಪಾಯಿ, ಖುಷ್ಕಿ ಜಮೀನಿಗೆ 6,800 ರೂಪಾಯಿ ಹಾಗೂ ವಾಣಿಜ್ಯ ಬೆಳೆಗಳಿಗೆ 18,000 ಪರಿಹಾರ ನಿಗದಿ ಪಡಿಸಿರುವುದು ಅನ್ನದಾತರಿಗೆ ಮಾಡುವ ಅವಮಾನ. ಆರು ವರ್ಷದ ಹಿಂದೆ ಇದ್ದ ಪರಿಹಾರವನ್ನೇ ಈಗಲೂ ನೀಡುತ್ತಿರುವುದು ಖಂಡನೀಯ. ಈ ಮೊತ್ತವು ರೈತರು ಕೆಲಸಗಾರರಿಗೆ ನೀಡಿರುವ ಕೂಲಿಯನ್ನು ಕೂಡ ಭರಿಸುವುದಿಲ್ಲ. ಬೊಮ್ಮಾಯಿ ಸರ್ಕಾರಕ್ಕೆ ರೈತರ ಮೇಲೆ ನಿಜಕ್ಕೂ ಕಾಳಜಿಯಿದ್ದರೆ, ದೆಹಲಿಯ ಕೇಜ್ರಿವಾಲ್ ಸರ್ಕಾರದಂತೆ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡಲಿ” ಎಂದು ಆಗ್ರಹಿಸಿದೆ.
ಬೆಳೆಹಾನಿಯಿಂದ ಕಂಗೆಟ್ಟು ಇಬ್ಬರು ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರವು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಇನ್ನಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವಿದೆ. ಸರ್ಕಾರ ಕೊಡುವ ಅಲ್ಪ ಮೊತ್ತದ ಪರಿಹಾರಕ್ಕಾಗಿ ರೈತರು ಅನೇಕ ದಾಖಲೆಗಳನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ರೈತರನ್ನು ಅನಾವಶ್ಯಕವಾಗಿ ಅಲೆದಾಡಿಸಲಾಗುತ್ತಿದೆ. ದಾಖಲೆಯಲ್ಲಿ ಸಣ್ಣ ಲೋಪವಿದ್ದರೂ ಪರಿಹಾರವನ್ನು ನಿರಾಕರಿಸಲಾಗುತ್ತಿದೆ. ಬೆಳೆ ಕೊಯ್ಲಿನ ಬಳಿಕ ಉಂಟಾದ ನಷ್ಟವನ್ನು ಕೂಡ ಪರಿಗಣಿಸಬೇಕು. ಆದರೆ ಅಧಿಕಾರಿಗಳು ಗಿಡ ಅಥವಾ ಮರದಲ್ಲಿದ್ದಾಗ ಹಾನಿಗೊಂಡ ಬೆಳೆಯ ನಷ್ಟವನ್ನಷ್ಟೇ ಲೆಕ್ಕ ಹಾಕುತ್ತಿದ್ದಾರೆ.
ರೈತರಿಗೆ ಸೂಕ್ತ ಪರಿಹಾರ ತಲುಪುವವರೆಗೂ ಬ್ಯಾಂಕ್‌ಗಳು ಸಾಲ ವಸೂಲಿಗೆ ಸಂಬಂಧಿಸಿ ಒತ್ತಡ ಹೇರಬಾರದು. ಈ ಕುರಿತು ಸರ್ಕಾರವು ಎಲ್ಲ ಬ್ಯಾಂಕ್‌ಗಳಿಗೆ ಸ್ಪಷ್ಟ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ, ಸಾಲಕ್ಕೆ ಹೆದರಿ ರೈತರ ಆತ್ಮಹತ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಶೀಘ್ರವೇ ಪರಿಹಾರ ಸಿಗುವಂತೆ ಮಾಡುವ ಮೂಲಕ ರೈತರ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು
ಉಡುಪಿ ಜಿಲ್ಲಾ ಎಎಪಿ ಸಂಘಟನಾ ಮುಖ್ಯಸ್ಥ ಸ್ಟೀಫನ್ ರಿಚರ್ಡ್ ಲೋಬೋ ಹೇಳಿದ್ದಾರೆ.
Kshetra Samachara
23/11/2021 04:52 pm