ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಅವರ ಮೇರು ಸಾಧನೆಯೊಂದಿಗೆ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ವಿನೂತನ ಅಧ್ಯಾಯವೊಂದು ಶುರುವಾಗಿದೆ. ಒಲಿಂಪಿಕ್ಸ್ ಚರಿತ್ರೆಯಲ್ಲೇ ರಾಷ್ಟ್ರಕ್ಕಾಗಿ ಚೊಚ್ಚಲ ಅಥ್ಲೆಟಿಕ್ಸ್ ಪದಕವನ್ನು ಗೆಲ್ಲುವುದರ ಜೊತೆಗೆ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮದಲ್ಲಿರುವ ಭಾರತಕ್ಕೆ ಅವಿಸ್ಮರಣೀಯ ಕೊಡುಗೆಯನ್ನೂ ನೀಡಿದ್ದಾರೆ.
2019ರಲ್ಲಿ ನೀರಜ್, ತಮ್ಮ ಶಕ್ತಿ ಸಾಮರ್ಥ್ಯ- ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು. ಯಾಕೆಂದರೆ ಭುಜದ ಬಿಗಿತ, ಮೊಣಕೈ ನೋವು ಮತ್ತು ಬೆನ್ನುನೋವಿನಿಂದ ಈ ಯುವ ಈಟಿ ಎಸೆತಗಾರ ತೀವ್ರವಾಗಿ ಬಳಲುತ್ತಿದ್ದರು. ಪರೀಕ್ಷಿಸಿದ ವೈದ್ಯರ ಸೂಚನೆಯಂತೆ ಶಸ್ತ್ರಚಿಕಿತ್ಸೆ ಗೆ ಒಳಗಾಗಬೇಕಾಯಿತು. ಆಗ
ಇನ್ನೇನು ಒಲಿಂಪಿಕ್ಸ್ ಆರಂಭವಾಗಲು ಕೇವಲ ವರ್ಷ ಮಾತ್ರವೇ ಉಳಿದಿತ್ತು.
ಮೈದಾನದಲ್ಲೇ ಹೆಚ್ಚು ಸಮಯ ಕಳೆಯಬೇಕಿದ್ದ ನೀರಜ್, ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಯ ಬಳಿಕದ ವಿಶ್ರಾಂತಿಗಾಗಿ ತಿಂಗಳುಗಳ ಕಾಲ ಬೆಡ್ ಮೇಲೆ ಕಳೆಯಬೇಕಾಯಿತು. ಇನ್ನೇನು ಮತ್ತೆ ಮೈದಾನಕ್ಕಿಳಿಯಬೇಕು ಎನ್ನುವಷ್ಟರಲ್ಲಿ ಕೊರೊನಾ ಲಾಕ್ಡೌನ್ ಆರಂಭವಾಗಿತ್ತು. ಹೀಗಾಗಿ ನೀರಜ್ ಅವರ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ, ಜಾವೆಲಿನ್ಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ನೀರಜ್ ಚೋಪ್ರಾ, ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಮೈದಾನಕ್ಕಿಳಿದು ಬೆವರಿಳಿಸಿದರು. ನಿರಂತರ ಅಭ್ಯಾಸ, ಕಠಿಣ ಪರಿಶ್ರಮದೊಂದಿಗೆ ತಮ್ಮ ಹಿಂದಿನ ಎಲ್ಲ 'ಕ್ರೀಡಾಶಕ್ತಿ' ಯನ್ನು ಮರಳಿ ಪಡೆದರು. ಅಷ್ಟೇ ಅಲ್ಲದೆ, ಪದಕ ಗೆಲ್ಲುವ ದೃಢ ನಿಶ್ಚಯದೊಂದಿಗೆ ಟೋಕಿಯೋ ಒಲಿಂಪಿಕ್ಸ್ ಗ್ರಾಮಕ್ಕೆ ಆಗಮಿಸಿದ್ದರು. ಬಳಿಕ ನಡೆದದ್ದು 'ಐತಿಹಾಸಿಕ ಸಾಧನೆ'.
PublicNext
08/08/2021 05:02 pm