ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆ ಜ.26 ರಂದು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು.
ಸದ್ಯ ಈ ಪ್ರತಿಭಟನೆಗೆ ಸಾಥ್ ನೀಡುವ ಅನೇಕ ಟ್ವೀಟ್ ಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿವೆ.
ಪಾಪ್ ಸಿಂಗರ್ ರಿಹನ್ನಾ ಹಾಗೂ ಕ್ಲೈಮೇಟ್ ಆಕ್ಟಿವಿಸ್ಟ್ ಗ್ರೆಟಾ ಥನ್ಬರ್ಗ್ ರೈತ ಪ್ರತಿಭಟನೆ ಬಗ್ಗೆ ಧ್ವನಿ ಎತ್ತಿದ್ದೇ ತಡ ಭಾರತದ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಒಗ್ಗಟ್ಟಿನ ಸಂದೇಶವನ್ನ ಸಾರುತ್ತಿದ್ದಾರೆ.
ಈ ಅಭಿಯಾನಕ್ಕೆ ಸ್ಟಾರ್ ಕ್ರಿಕೆಟಿಗರೂ ಸಾಥ್ ನೀಡಿದ್ದು ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಕೊಹ್ಲಿ, ರಹಾನೆ, ರೋಹಿತ್ ಶರ್ಮಾ ಸೇರಿದಂತೆ ಅನೇಕರು ನಾವೆಲ್ಲ ಒಂದಾಗಿದ್ದೇವೆ ಎಂಬ ಮೆಸೇಜ್ ನೀಡಿದ್ದಾರೆ.
ಆದರೆ ವಿವಾದದ ಮೂಲಕ ಸುದ್ದಿಯಾಗುವ ನಟಿ ಕಂಗನಾ ರಣಾವತ್ ಕ್ರಿಕೆಟಿಗರ ಟ್ವೀಟ್ ಗೂ ವಿವಾದಿತ ರಿ ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಒಗ್ಗಟ್ಟಾಗಿ ಇದ್ದಾಗ ಪ್ರತಿಬಾರಿಯೂ ಭಾರತ ಬಲಿಷ್ಠ ರಾಷ್ಟ್ರ ಎಂದು ತೋರಿಸಿಕೊಂಡಿದೆ. ನಮ್ಮ ದೇಶದಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ಎಲ್ಲರೂ ತಮ್ಮ ಪಾತ್ರದ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಂಗನಾ,ರೋಹಿತ್ ಶರ್ಮಾರನ್ನ ಅಗಸನ ನಾಯಿ ಎಂದು ಜರಿದಿದ್ದಾರೆ.
ಯಾಕೆ ಈ ಭಾರತೀಯ ಕ್ರಿಕೆಟಿಗರು ಅಗಸನ ನಾಯಿಯಂತೆ ಆಡುತ್ತಾರೆ..? ಮನೆಗೂ ಉಪಯೋಗವಿಲ್ಲ…..ಹೊರಗಡೆಯೂ ಪ್ರಯೋಜನಕ್ಕೆ ಬರೋದಿಲ್ಲ. ರೈತರ ಒಳಿತಿಗಾಗಿಯೇ ಮಾಡಿರುವ ಕಾನೂನನ್ನ ಅವರೇಕೆ ವಿರೋಧಿಸ್ತಾರೆ..? ಈ ಉಗ್ರರು ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಇದನ್ನೆಲ್ಲ ಹೇಳಬೇಕು ನೀವು…..ಯಾಕೆ ಅಷ್ಟೊಂದು ಭಯಾನಾ..? ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಟ್ವೀಟ್ ನ್ನು ಟ್ವಿಟರ್ ಇಂಡಿಯಾ ಅಳಿಸಿ ಹಾಕಿದೆ. ಇದು ಮಾತ್ರವಲ್ಲದೇ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಕಂಗನಾ ಮಾಡಿದ್ದ ಟ್ವೀಟ್ ನ್ನೂ ಡಿಲೀಟ್ ಮಾಡಿದೆ.
PublicNext
04/02/2021 05:29 pm