ಇತ್ತೀಚೆಗೆ ಕೇಂದ್ರ ಸರ್ಕಾರ ಭೂತಾನ್ ದೇಶದಿಂದ ವರ್ಷಕ್ಕೆ 17 ಸಾವಿರ ಟನ್ ಅಡಿಕೆಯನ್ನು ಕನಿಷ್ಠ ಆಮದು ಬೆಲೆ ಪರಿಗಣಿಸದೇ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯ ಅನುಮತಿ ನೀಡುವ ವಿಚಾರವು ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಹೆಚ್.ಎಸ್. ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ವಿವಿಧ ರೀತಿಯ ಹೇಳಿಕೆಗಳು ಸಹ ಅಡಿಕೆ ಬೆಳೆಗಾರರನ್ನು ಗೊಂದಲಕ್ಕೆ ಎಡೆ ಮಾಡುತ್ತದೆ. ಈ ಆತಂಕ ಮತ್ತು ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ದೇಶಿಯ ಅಡಿಕೆ ಬೆಳೆಗಾರರ ಹಿತಾಸಕ್ತಿ, ರಕ್ಷಣೆಗಾಗಿ ತರಲಾಗಿದ್ದ ಅಡಿಕೆ ಆಮದು ನಿರ್ಬಂಧ ಹಾಗೂ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ತಿದ್ದುಪಡಿ ತಂದಿದ್ದು, ಕಡಿಮೆ ಬೆಲೆಗೆ ಅಡಿಕೆಯನ್ನು ಆಮದು ಮಾಡಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ "ಕನಿಷ್ಠ ಆಮದು ಬೆಲೆ ನೀತಿ'ಯನ್ನು ಕೇಂದ್ರ ವಾಣಿಜ್ಯ ಸಚಿವಾಲಯ ಜಾರಿಗೆ ತಂದಿದೆ. ಈ ಪ್ರಕಾರ ಸಂಸ್ಕರಣೆ ಮಾಡಿದ ಅಡಿಕೆ ಕೆ.ಜಿ. ಒಂದಕ್ಕೆ ರೂ. 251-10 ಕವಿಷ್ಯ ಬೆಂಬಲ ಬೆಲೆ ಇದ್ದು, ಇದನ್ನು ರೂ. 360 ಕ್ಕೆ ಏರಿಸಲು ವಿವಿಧ ಸಹಕಾರ ಸಂಘಗಳ ನೇತೃತ್ವದಲ್ಲಿ ಕೇಂದ್ರಕ್ಕೆ ಮನವಿ ಮಾಡಲಾಗುತ್ತದೆ ಎಂದಿದ್ದಾರೆ.
ಭೂತಾನ್ ದೇಶದಿಂದ ಆಮದಾಗುವ ಅಡಿಕೆಯಿಂದ ಭಾರತದ ಮಾರುಕಟ್ಟೆ ಮೇಲೆ ಯಾವುದೇ ರೀತಿಯಿಂದಲೂ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಅಲ್ಲದೆ, ಈಗಾಗಲೇ ಬೇರೆ ದೇಶದಿಂದ ಆಮದಾಗುವ ಅಡಿಕೆಯನ್ನು ನಿಯಂತ್ರಿಸುವ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಮ್‌ಕೋಸ್ ಸೇರಿದಂತೆ ಎಲ್ಲಾ ಸಹಕಾರ ಸಂಘಗಳು ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘಗಳ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದಿದ್ದಾರೆ.
PublicNext
07/10/2022 06:40 pm