ಶಿವಮೊಗ್ಗ: ರಾಜ್ಯ ಸರ್ಕಾರ ವಾಣಿಜ್ಯ ವಾಹನಗಳಿಗೆ ಹಳದಿ ಪಟ್ಟಿ ಅಳವಡಿಸುವ ಅವೈಜ್ಞಾನಿಕ ಕ್ರಮ ರದ್ದುಪಡಿಸಬೇಕೆಂದು ಆಗ್ರಹಿಸಿ ಕುವೆಂಪು ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಚಾಲಕರ ಮತ್ತು ಮಾಲೀಕರ ಸಂಘದಿಂದ ಇಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಅವೈಜ್ಞಾನಿಕ ಹಳದಿ ಪಟ್ಟಿ ಅಳವಡಿಸಲು 5 ಸಾವಿರ ರೂ. ಖರ್ಚಾಗಲಿದೆ. ಲಕ್ಷಾಂತರ ರೂ. ನೀಡಿ ಸುಂದರವಾದ ವಾಹನ ಖರೀದಿಸಿ ದುಬಾರಿ ಪೇಯಿಂಟ್ ಮೇಲೆ ಈ ಹಳದಿ ಪೇಯಿಂಟ್ ನಿಂದ ಡ್ಯಾಮೇಜ್ ಆಗುವುದಲ್ಲದೇ, ವಾಹನ ಮಾರಾಟ ಮಾಡುವ ಸಂದರ್ಭದಲ್ಲಿ ಅವಲಕ್ಷಣವಾಗಿ ಕಾಣುವುದರಿಂದ ವಾಹನಕ್ಕೆ ಬೆಲೆ ಕಡಿಮೆಯಾಗುತ್ತದೆ. ವೈಟ್ ಬೋರ್ಟ್ ಮಾಡಿಸುವಾಗಲು ಸಮಸ್ಯೆಯಾಗುತ್ತದೆ. ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕರಿಗೆ ಅಥವಾ ಮಾಲೀಕರಿಗೆ ಸರ್ಕಾರ ಯಾವುದೇ ರಿಯಾಯಿತಿ ನೀಡಿಲ್ಲ. ವಾಣಿಜ್ಯ ವಾಹನಗಳಿಗೆ ಬಾಡಿಗೆ ಮಾಡಲು ಉಚಿತ ನಿಲ್ದಾಣ ಸಹ ನೀಡಿಲ್ಲ. ವೈಟ್ ಬೋರ್ಡ್ ವಾಹನಗಳು ಬಾಡಿಗೆ ಮಾಡುತ್ತಿರುವುದರಿಂದ ಹಳದಿ ಬೋರ್ಡ್ ವಾಹನಗಳಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿದರು.
ಬಾಡಿಗೆ ವಾಹನಗಳನ್ನು ಓಡಿಸುವ ಬಡ ಮಾಲೀಕರಿಗೆ ಸರ್ಕಾರದ ಈ ನಿರ್ಧಾರದಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈ ಆದೇಶವನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ಸತೀಶ್ ಪೂಜಾರಿ, ರುದ್ರೇಶ್, ಕಾರ್ಯದರ್ಶಿ ರವಿ ಕೋಣಗದ್ದೆ ಮೊದಲಾದವರಿದ್ದರು.
PublicNext
27/09/2022 09:00 am