ಶಿವಮೊಗ್ಗ: ನೆಹರೂ, ಇಂದಿರಾಗಾಂಧಿ, ಸೋನಿಯಾಗಾಂಧಿ ಅವರುಗಳಿಂದಲೇ ಆರ್ ಎಸ್ ಎಸ್ ನ ಒಂದು ಕೂದಲು ಅಲ್ಲಾಡಿಸಲು ಆಗಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆರ್ ಎಸ್ ಎಸ್ ನಿಷೇಧ ಮಾಡಬೇಕು ಅಂತಿದ್ದಾರೆ. ಆದರೆ, ರಾಷ್ಟ್ರ ಭಕ್ತ ಸಂಘಟನೆ ಆರ್ ಎಸ್ ಎಸ್ ನಿಷೇಧ ಮಾಡಲು ಯಾವ ಕಾಂಗ್ರೆಸ್ ನಾಯಕನಿಂದಲೂ ಆಗಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಜಿನ್ನಾ ಸಂತತಿಯವರು, ಕನಕದಾಸ ಸಂತತಿಯವರಲ್ಲ. ನಮ್ಮದು ಸಂಗೊಳ್ಳಿರಾಯಣ್ಣ, ಕನಕದಾಸ ರಕ್ತ. ಜಿನ್ನಾ ಅವರ ರಕ್ತ ಸಿದ್ದರಾಮಯ್ಯನದ್ದು, ಹೀಗಾಗಿ ಅವರಿಗೆ ಪಿಎಫ್ ಐ ಮೇಲೆ ಬಹಳ ಪ್ರೀತಿ. ಪಿಎಫ್ ಐ ಬಗ್ಗೆ ಪ್ರೀತಿ ಮಾಡುವ ಸಿದ್ಧರಾಮಯ್ಯ, ಆರ್ ಎಸ್ ಎಸ್ ದ್ವೇಷ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ದ್ವೇಷ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್ ನಿರ್ನಾಮ ಆಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ನಾಮವಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ, ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಳೀನ್ ಕುಮಾರ್ ಕಟೀಲ್ ಗೆ ಸಿದ್ದರಾಮಯ್ಯ ವಿದೂಷಕ ಎಂದು ಹೇಳಿರೋ ಬಗ್ಗೆ ಕಿಡಿ ಕಾರಿದ ಈಶ್ವರಪ್ಪ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ವಿಲನ್, ರಾಜ್ಯಕ್ಕೂ ವಿಲನ್, ದೇಶಕ್ಕೂ ವಿಲನ್. ಕಟೀಲ್ ವಿದೂಷಕ ಅಲ್ಲ, ನಮ್ಮ ರಾಜ್ಯದಲ್ಲಿ ಪಕ್ಷ ಕಟ್ಟುತ್ತಿರುವ ಸಂಘಟನೆಯ ನೇತಾರ. ಈ ವಿಲನ್ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಿದ್ದರಾಮಯ್ಯ ಡಿಕೆಶಿಗೂ ವಿಲನ್, ಕಾಂಗ್ರೆಸ್ ಗೂ ವಿಲನ್ ಆಗಿದ್ದು, ಹಿಂದೂಗಳ ಓಟು ಬೇಡ ಅಂತಾ ಹೇಳಲಿ ನೋಡೋಣ. ಹಿಂದೂಗಳ ಸಂಘಟನೆ ಮಾಡ್ತಿರೋದೆ ಆರ್ ಎಸ್ ಎಸ್. ನಮಗೆ ಹಿಂದೂಗಳ ಓಟು ಬೇಡ, ಕೇವಲ ಮುಸಲ್ಮಾನ್ ಓಟು ಮಾತ್ರ ಬೇಕು ಅಂತಾ ಹೇಳಲಿ ನೋಡೋಣ ಎಂದು ಟೀಕಿಸಿದ್ದಾರೆ.
ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ, ಡಿಕೆಶಿ ಮನೆಯಲ್ಲಿ ಬಂಡಲ್ ಗಟ್ಟಲೆ ನೋಟು ಸಿಕ್ತು. ನಿಮ್ಮ ಟಿವಿಗಳಲ್ಲೇ ನಾನು ನೋಡಿದ್ದೇನೆ. ಬಂಡಲ್ ಗಟ್ಟಲೆ ಅಕ್ರಮ ಹಣ ಸಿಕ್ತಲ್ಲಾ ಇದು ಸುಳ್ಳಾ...? ಹಾಗಾದ್ರೆ ಅವರ ಮನೆ ರೇಡ್ ಮಾಡಿದ್ದು ತಪ್ಪಾ...? ಕಳ್ಳತನ ಮಾಡಿದ್ರೆ ಬಿಡಬೇಕಾ....? ಭಾರತ್ ಜೋಡೋ ಯಾತ್ರೆ ಮಾಡ್ತಿದ್ದೇವೆ, ಅಧಿವೇಶನ ನಡೆಯುವ ವೇಳೆ ರೇಡ್ ಮಾಡ್ತಾರೆ ಅಂತಾರೆ. ಇನ್ನು ಮೇಲೆ ಡಿಕೆಶಿ ಮನೆ ಮೇಲೆ ರೇಡ್ ಮಾಡಬೇಕಾದರೆ ಡೇಟ್ ಕೊಟ್ಟು ರೇಡ್ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಜಾಸ್ತಿ ಲೂಟಿ ಮಾಡಿದ್ದರಿಂದಲೇ ತಿಹಾರ್ ಜೈಲಿಗೆ ಹೋಗಿ ಬಂದಿದ್ದು. ನಲಪಾಡ್ ಏಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾ....? ಜೈಲಿಗೆ ಹೋಗಿ ಬಂದವರ ಕೈಯಲ್ಲಿ ಇಂದು ಕಾಂಗ್ರೆಸ್ ಇದೆ. ರಾಜ್ಯದ ಜನ ಜೈಲಿಗೆ ಹೋಗಿ ಬಂದವರ ಸಹವಾಸ ಬೇಡ ಅಂತಾ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ರು..
PublicNext
29/09/2022 07:46 pm