ಬೆಂಗಳೂರು : ಕಾಗದಪತ್ರಗಳಿಲ್ಲದೆಯೇ ಸುಮಾರು ₹50 ಕೋಟಿ ಹೂಡಿಕೆ ಮಾಡಿದ್ದೇವೆ. ಆದರೆ, ಎರಡು ವರ್ಷಗಳಾದರೂ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ ಒಪ್ಪಂದದ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ಕಡತಗಳನ್ನು ತಡೆ ಹಿಡಿದಿದ್ದಾರೆ. ಈ ರೀತಿ ವಿಳಂಬ ನೀತಿ ಅನುಸರಿಸಿದರೆ ಹೇಗೆ?' ಎಂದು ಸದನದಲ್ಲೇ ಹಾಜರಿದ್ದ ಪಂಕಜಕುಮಾರ್ ಅವರತ್ತ ಕೈತೋರಿಸಿ ಸಚಿವ ಮುರುಗೇಶ ನಿರಾಣಿ ಕಿಡಿ ಕಾರಿದ್ದಾರೆ.
ಇನ್ನು ಅಧಿಕಾರಿ ವಿರುದ್ಧ ಸದನದಲ್ಲಿ ನೇರ ಆರೋಪ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು.
ಪಂಕಜಕುಮಾರ್ ಪಾಂಡೆ
'ಅಧಿಕಾರಿಗಳ ವಿರುದ್ಧ ಆರೋಪಿಸುತ್ತಿರುವ ನಿರಾಣಿ ಅವರು ಹಿರಿಯ ಸಚಿವರು. ಇಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ ಎನ್ನುವುದಕ್ಕೆ ಈ ಉದಾಹರಣೆ ಸಾಕ್ಷಿ' ಎಂದೂ ದೂರಿದರು.
ಜೆಡಿಎಸ್ ನ ಎಸ್.ಎಲ್. ಭೋಜೇಗೌಡ ಮತ್ತು ಟಿ.ಎ. ಶರವಣ ಅವರು, 'ಒಬ್ಬ ಮಂತ್ರಿಗೆ ಈ ಪರಿಸ್ಥಿತಿಯಾದರೆ ಉಳಿದವರ ಗತಿ ಏನು? ಅಧಿಕಾರಿ ದೊಡ್ಡವರೋ ಅಥವಾ ಸರ್ಕಾರ ದೊಡ್ಡದೋ' ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ನಿರಾಣಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಆಡಳಿತ ಪಕ್ಷದ ಸಚಿವರು ಮತ್ತು ಆಡಳಿತ ಪಕ್ಷದ ಸದಸ್ಯರು ಧಾವಿಸಿದರು. 'ಕಾರ್ಯಾಂಗದಲ್ಲಿನ ಲೋಪದ ಬಗ್ಗೆ ಒಂದು ಘಟನೆಯನ್ನು ಸಚಿವರು ಉಲ್ಲೇಖಿಸಿದ್ದಾರೆ. ಸಚಿವರ ಮನಸ್ಸಿಗೆ ಘಾಸಿಯಾಗಿದ್ದಕ್ಕೆ ಹೇಳಿದ್ದಾರೆ' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.
PublicNext
21/09/2022 12:47 pm