ಹೈದರಾಬಾದ್ : ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಆಕ್ರೋಶ ಹೆಚ್ಚಾಗಿದೆ.ಪ್ರತಿಭಟನೆಯಲ್ಲಿ ತಲೆಯನ್ನು ದೇಹದಿಂದ ಬೇರ್ಪಡಿಸಿ ಎಂಬ ಘೋಷಣೆಗಳು ಮೊಳಗುತ್ತಲೇ ಇದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಯತ್ನಿಸುವಾಗ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 41(ಎ) ಅಡಿಯಲ್ಲಿ ಯಾವುದೇ ನೋಟಿಸ್ ನ್ನು ಶಾಸಕ ರಾಜಾ ಸಿಂಗ್ ಅವರಿಗೆ ನೀಡಲಾಗಿಲ್ಲ ಎಂದು ರಾಜಾ ಸಿಂಗ್ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಎದುರು ವಾದಿಸಿದರು. ವಕೀಲರ ಈ ವಾದವನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಜಾಮೀನನ್ನು ನೀಡಿತ್ತು.
ಜಾಮೀನು ದೊರಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತೆಲಂಗಾಣದಾದ್ಯಂತ ಪ್ರತಿಭಟನೆಗಳು ಮಿತಿಮೀರಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.ಹೈದರಾಬಾದ್ ನ ಶಾಲಿಬಂಡಾದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ ಏರ್ಪಟ್ಟಿದೆ. ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ನ್ನು ಧ್ವಂಸಗೊಳಿಸಿದ್ದಾರೆ. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು ಮಾತ್ರವಲ್ಲದೇ ರಾಜಾ ಸಿಂಗ್ ಪೋಸ್ಟರ್ ಗೆ ಚಪ್ಪಲಿಯಿಂದ ಹೊಡೆದು ಅವರ ಪ್ರತಿಕೃತಿ ದಹಿಸಿದ್ದಾರೆ.
ನೂಪುರ್ ಶರ್ಮಾ ಬೆನ್ನಲ್ಲೇ ತೆಲಂಗಾಣದ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದಾರೆ.
PublicNext
24/08/2022 09:40 pm