ಬೆಂಗಳೂರು: ರಾಜ್ಯದಲ್ಲಿನ ನಡೆಯುತ್ತಿರುವ ಸರಣಿ ಹತ್ಯಾಕಾಂಡದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
ಅದರಲ್ಲಿಯೂ ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ. ಈ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾದೀತು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಸುನೀಲ್ ಕುಮಾರ್, ವಿ.ಎಚ್.ಪಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ಮಾಡಬೇಕಾಗಿದೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರ್ ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು.ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ.
ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಬೆಂಕಿ ಕಾರಿದರೂ, ಅದನ್ನು ಅವರೇ ಹಲವು ಬಾರಿ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿಅವರು ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ದುಷ್ಕರ್ಮಿಗಳ ದಾಳಿಯಿಂದ ಬಲಿಯಾಗಿದ್ದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು.
ಮೃತ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಎಷ್ಟೇ ಮೊತ್ತದ ಪರಿಹಾರ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ್ದು, ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ. ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಕುಣಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
PublicNext
29/07/2022 05:07 pm