ಬೆಳಗಾವಿ: ಬಿಜೆಪಿಯ ತಿರಂಗಾಯಾತ್ರೆಗೆ ಮಹತ್ವವಿಲ್ಲ ಮೊದಲಾಗಿ ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರಿಗೆ ತಿರಂಗಾಯಾತ್ರೆಯ ನೈತಿಕತೆಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿಯ ತಿರಂಗಾ ಯಾತ್ರೆಯ ಕುರಿತು ವ್ಯಂಗ್ಯವಾಡಿದರು.
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲೆಯ ಮುಖಂಡರ ಜೊತೆ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ ನಡೆಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ದೇಶದ ಪ್ರಧಾನಿ ಸ್ವಾತಂತ್ರ್ಯ ದಿನದಂದು ಮನೆ ಮನೆ ಮೇಲೆ ತ್ರಿವರ್ಣ ದ್ವಜ ಹಾರಿಸಿ ಎಂಬ ಹೇಳಿಕೆ ನೀಡಿದ್ದಾರೆ ಆದರೆ ಬಿಜೆಪಿಗರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗದೆ, ಇಂದು ದೇಶ, ದೇಶಭಕ್ತಿ, ರಾಷ್ಟ್ರದ್ವಜ ಎಂದು ಮಾತನಾಡುವುದನ್ನು ನೋಡಿದರೆ ನಗು ಬರುತ್ತದೆ ಎಂದು ಲೇವಡಿ ಮಾಡಿದರು.
ಇನ್ನು ಈ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮ ಪಕ್ಷದ ಬಗ್ಗೆ ಹೇಳಬೇಕೆಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾವು 75 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದು, ಅಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಪಾತ್ರ ಏನು? ಬಿಜೆಪಿ ಅವರ ಪಾತ್ರ ಏನು ಅಂತ ಜನರಿಗೆ ತಿಳಿಹೇಳುತ್ತೇವೆ ಎಂದರು. ಸಿದ್ದರಾಮೊತ್ಸವ ಅಭಿಮಾನಿಗಳು ಮಾಡುವ ಒಂದು ಹಬ್ಬವಾಗಿದ್ದು, ಇದರಿಂದ ಮುಂದೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಆದರೂ ಆಶ್ಚರ್ಯವಿಲ್ಲ ಎಂದರು.
PublicNext
25/07/2022 06:48 pm