ಮೈಸೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ₹600 ಕೋಟಿ ಹಗರಣದಲ್ಲಿ ಭಾಗಿ ಆಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 15 ಅಪೆಕ್ಸ್ ಬ್ಯಾಂಕ್‌ಗಳಿಂದ ರಮೇಶ್ ಜಾರಕಿಹೊಳಿ ₹366 ಕೋಟಿ ಸಾಲ ಪಡೆದಿದ್ದಾರೆ. ಹಾಗೂ ಯೂನಿಯಂ ಬ್ಯಾಂಕ್ ಮತ್ತು ಹರಿಯನ್ ಕೋಆಪರೇಟಿವ್ ಸೊಸೈಟಿಯಿಂದ ತಲಾ 20 ಕೋಟಿ ಸಾಲ ಪಡೆದಿದ್ದಾರೆ. ಪಡೆದಿರುವ ಸಾಲದಲ್ಲಿ ರಮೇಶ್ ಜಾರಕಿಹೊಳಿ ಅವರು ನಯಾಪೈಸೆ ಮರುಪಾವತಿ ಮಾಡಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಸೌಭಾಗ್ಯಲಕ್ಷಿ ಶುಗರ್ಸ್ ಲಿಮಿಟೆಡ್ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಘೋಷಿಸಲಾಗಿತ್ತು. ಇದು ಅನುತ್ಪಾದಕ ಆಸ್ತಿ ಎಂದು ಘೋಷಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಆನಂತರ ರಮೇಶ್ ಜಾರಕಿಹೊಳಿ ಅವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. 2019 ರಲ್ಲಿ ಮಧ್ಯಂತರ ಆದೇಶವನ್ನು ನೀಡುವಾಗ ಸಾಲದ ಮೊತ್ತದ ಶೇಕಡಾ 50 ರಷ್ಟು ಮೊತ್ತವನ್ನು ಆರು ವಾರಗಳಲ್ಲಿ ಪಾವತಿಸಲು ನ್ಯಾಯಾಲಯವು ಅವರಿಗೆ ಸೂಚಿಸಿತು ಎಂದು ಎಂ. ಲಕ್ಷ್ಮಣ್ ಹೇಳಿದ್ದಾರೆ.
“1,000 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವ ಕಂಪನಿಯು ಆಸ್ತಿಯನ್ನು ಕಡಿಮೆ ಮೌಲ್ಯಮಾಪನ ಮಾಡಿದೆ, ಆದರೆ ಅದರ ಮೌಲ್ಯವು 850 ಕೋಟಿ ರೂ. ಆಗಿದೆ. 610 ಕೋಟಿ ರೂ.ಗಳ ವ್ಯವಸ್ಥಿತ ಹಗರಣ ಇದಾಗಿದೆ. ಜಾರಕಿಹೊಳಿ ಉದ್ದೇಶಪೂರ್ವಕ ಸುಸ್ತಿದಾರನಾಗಿದ್ದಾರೆ. ಆದರೆ ಇನ್ನೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಅವರ ಆರೋಪವಾಗಿದೆ.
PublicNext
04/05/2022 12:41 pm