ದಾವಣಗೆರೆ: ಉಪ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸುತ್ತೇವೆ. ಗೆದ್ದೇ ಗೆಲ್ಲುತ್ತೇವೆ. ಅನುಮಾನ ಬೇಡ. ಕಾಂಗ್ರೆಸ್ ನವರ ಆರ್ಭಟಗಳು ನಡೆಯುವುದಿಲ್ಲ ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.
ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಂದೆಡೆ ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಕೊರೊನಾ ಹೊಡೆತ, ಮತ್ತೊಂದೆಡೆ ಬೆಲೆ ಏರಿಕೆ ಆಗಿದೆ. ಎಲ್ಲಾ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಬೆಲೆ ಏರಿಕೆ ಆಗಿದೆ. ಈಗಲೂ ಆಗಿದೆ ಅಷ್ಟೇ. ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಬೆಲೆಏರಿಕೆ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಆದಾಗ ಯಾಕೆಮಾತನಾಡಲಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬೆಲೆ ಏರಿಕೆ ಆಗಿಲ್ಲವೇ? ಇಲ್ಲಿ ಮಾತ್ರ ಆಗಿದೆಯೇ? ಎಂದು ಪ್ರಶ್ನೆ ಮಾಡಿದರು.
ಸಿಎಂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ವಹಿಸುವ ಬಗ್ಗೆ ಅವರೇ ತೀರ್ಮಾನಿಸುತ್ತಾರೆ. ಉಸ್ತುವಾರಿ ಅವರ ಬಳಿಯೇ ಇದ್ದು, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಸೋಮಣ್ಣ, ಆರ್. ಅಶೋಕ್ ಅವರು ಮುಖ್ಯಮಂತ್ರಿ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸಹ ಅವರ ಕೆಳಗಡೆಯೇ ಕೆಲಸ ಮಾಡುತ್ತಿದ್ದೇವೆ. ಅವರ ಬಳಿ ಇರುವುದಕ್ಕೆ ಅಭ್ಯಂತರ ಏನು ಇಲ್ಲ. ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದು ತಿಳಿಸಿದರಲ್ಲದೇ, ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಮೂರನೇ ಹಂತದ ಮೆಟ್ರೋ ಕಾಮಗಾರಿಗೂ ಚಾಲನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಕ್ಷೇತ್ರಗಳು ಹಾಗೂ ಜಿಲ್ಲೆಗಳಿಗೆ ವಿಶೇಷವಾದ ಗಮನ ನೀಡಿದ್ದಾರೆ ಎಂದು ಹೇಳಿದರು.
ಮತ್ತೆ ನಾವು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿದ್ದೇವೆ. ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಮತ್ತೆ ಕಾಂಗ್ರೆಸ್ ಹೋಗುವ ಮಾತೇ ಬರಲ್ಲ. ಬಿಜೆಪಿ ತತ್ವ, ಸಿದ್ದಾಂತ ಒಪ್ಪಿ ಬಂದಿದ್ದೇವೆ, ಇಲ್ಲೇ ಇರುತ್ತೇವೆ ಎಂದು ಹೇಳಿದ ಅವರು, ಐಟಿ ದಾಳಿ ಬಗ್ಗೆ ಕಾಂಗ್ರೆಸ್ ನವರು ಈಗ ಯಾಕೆ ಮಾತನಾಡುತ್ತಿಲ್ಲ. ಬಿ. ಎಸ್. ಯಡಿಯೂರಪ್ಪರ ಆಪ್ತರ ಮೇಲೆ ದಾಳಿ ನಡೆಸಿರುವುದಕ್ಕೆ ರಾಜಕೀಯ ಕಲ್ಪಿಸುವುದು ಬೇಡ.ಐಟಿ, ಇಡಿ ಸಂಸ್ಥೆಗಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ. ದೂರು ಬಂದರೆ ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ದಾಳಿ ಹಿಂದೆ ಯಡಿಯೂರಪ್ಪ ಅವರನ್ನಾಗಲೀ, ಅವರ ಪುತ್ರ ವಿಜಯೇಂದ್ರ ಅವರನ್ನಾಗಲೀ ಕಂಟ್ರೋಲ್ ಮಾಡುವುದಕ್ಕಾಗಿ ಎಂಬುದು ಶುದ್ಧ ಸುಳ್ಳು ಎಂದು ಹೇಳಿದರು.
PublicNext
12/10/2021 04:17 pm