ನವದೆಹಲಿ : ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಳಿಕ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮಾತನಾಡಿ ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿ ಮಾತನಾಡಿದರು.
ಒಂದು ರಾಜಕೀಯ ಪಕ್ಷ ಎನ್ನುವ ಕಾರಣಕ್ಕೆ ನಾನು ಕಾಂಗ್ರೆಸ್ ಸೇರುತ್ತಿಲ್ಲ. ಬದಲಾಗಿ ಇದು ದೇಶದ ಅಂತ್ಯಂತ ಹಳೆಯ ಹಾಗೂ ಪ್ರಜಾಪ್ರಭುತ್ವದ ಪಕ್ಷ. ನಾನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸಿಕೊಂಡವನು. ಕೇವಲ ನಾನು ಮಾತ್ರವಲ್ಲ ದೇಶದ ಸಾಕಷ್ಟು ಜನರು ಕಾಂಗ್ರೆಸ್ ಇಲ್ಲದೆ ದೇಶ ಉಳಿಯುವುದಿಲ್ಲ ಎಂದು ನಂಬಿದವರಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವು ದೊಡ್ಡ ಹಡಗಿನಂತಿದೆ. ಅದನ್ನು ಉಳಿಸಿದರೆ, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ಕಲ್ಪನೆಯನ್ನು ಸಹ ರಕ್ಷಿಸಿದಂತಾಗುತ್ತದೆ. ಅದಕ್ಕಾಗಿ ನಾನು ಈ ಪಕ್ಷವನ್ನು ಸೇರಿದೆ ಎಂದು ಕನ್ಹಯ್ಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ಕಾರಣಾಂತರಗಳಿಂದ ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರಲು ಆಗುತ್ತಿಲ್ಲ. ಆದರೆ, ಈ ಪಕ್ಷಕ್ಕೆ ನನ್ನ ಬೆಂಬಲ ಮುಂದುವರೆಯುತ್ತದೆ. ಹಾಗೂ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಮೂಲಕ ಎದುರಿಸುತ್ತೇನೆ ಎಂದರು.
PublicNext
28/09/2021 07:42 pm