ಥಾಣೆ: ಪ್ರಧಾನಿ ನರೇಂದ್ರ ಮೋದಿ ಸೋದರ ಪ್ರಹ್ಲಾದ್ ಮೋದಿ ಜಿಎಸ್ ಟಿ ಪಾವತಿಸಬೇಡಿ ಎಂದು ವರ್ತಕರಿಗೆ ಕರೆ ನೀಡಿದ್ದಾರೆ.
ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಸಂಘದ ಉಪಾಧ್ಯಕ್ಷರೂ ಆಗಿರುವ ಪ್ರಹ್ಲಾದ್ ಮೋದಿ, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ಚುರುಕು ಮುಟ್ಟಿಸಲು ಪ್ರತಿಭಟನೆಯ ಹಾದಿ ಹಿಡಿಯುವಂತೆಯೂ ವರ್ತಕರಿಗೆ ಕರೆ ನೀಡಿದ್ದಾರೆ.
ನಗರದಲ್ಲಿ ವರ್ತಕರ ಒಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು "ನಿಮ್ಮ ಹೋರಾಟ ಹೇಗಿರಬೇಕೆಂದರೆ ಉದ್ಧವ್ (ಮಹಾರಾಷ್ಟ್ರ ಸಿಎಂ) ಹಾಗೂ ನರೇಂದ್ರ (ಮೋದಿ) ನಿಮ್ಮ ಮನೆಬಾಗಿಲಿಗೆ ಬರಬೇಕು" ಎಂದು ಹೇಳಿದರು.
ತಾವು ದೇಶದ 6.50 ಲಕ್ಷ ನ್ಯಾಯಬೆಲೆ ಅಂಗಡಿ ಮಾಲಿಕರನ್ನು ಪ್ರತಿನಿಧಿಸುತ್ತಿರುವುದಾಗಿಯೂ ಹೇಳಿದ ಅವರು ಬೇಡಿಕೆ ಈಡೇರುವ ತನಕ ಜಿಎಸ್ ಟಿ ಪಾವತಿಸಬೇಡಿ ಎಂದ ಸಲಹೆ ನೀಡಿದ್ದಾರೆ.
"ಅದು ನರೇಂದ್ರ ಮೋದಿಯಾಗಿರಬಹುದು, ಅಥವಾ ಬೇರಿನ್ಯಾರಾದರೂ ಆಗಿರಬಹುದು, ಅವರು ನಿಮ್ಮ ಮಾತುಗಳನ್ನು ಕೇಳಬೇಕು.
ನಾನು ಇಂದು ನಿಮಗೆ ಹೇಳುತ್ತಿದ್ದೇನೆ, ನೀವು ನಮ್ಮ ಮಾತುಗಳನ್ನು ಕೇಳುವ ತನಕ ನಾವು ಜಿಎಸ್ ಟಿ ಪಾವತಿಸುವುದಿಲ್ಲ ಎಂದು ಮೊದಲು ಮಹಾರಾಷ್ಟ್ರ ಸರಕಾರಕ್ಕೆ ಬರೆಯಿರಿ. ನಾವು ಲೋಕಶಾಹಿ (ಪ್ರಜಾಪ್ರಭುತ್ವ)ದಲ್ಲಿದ್ದೇವೆ, ಗುಲಾಮಗಿರಿಯಲ್ಲಲ್ಲ," ಎಂದು ಅವರು ಹೇಳಿದರು.
PublicNext
31/07/2021 06:20 pm