ಬೆಂಗಳೂರು: ನನ್ನನ್ನು ಪವರ್ ಸೆಂಟರ್ ಎಂದು ಬಿಂಬಿಸಬೇಡಿ. ಪದೇ ಪದೇ ನನ್ನನ್ನು ಭೇಟಿಯಾಗಿ ಬಳಿಕ ಸಚಿವ ಸ್ಥಾನದ ಬಗ್ಗೆ ಹೊರಗೆ ಮಾತನಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಎಸ್‌ವೈ ತಮ್ಮ ಶಿಷ್ಯನಿಗೆ 'ಸಿಎಂ ಪಟ್ಟ' ಕೊಡಿಸಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಯಲ್ಲೂ ಬಿ.ಎಸ್. ಯಡಿಯೂರಪ್ಪನವರ ಪ್ರಭಾವ ಹೆಚ್ಚು ಬೀರಲಿದೆ ಎಂಬುದು ಸಚಿವ ಸ್ಥಾನ ಆಕಾಂಕ್ಷಿತರ ಲೆಕ್ಕಾಚಾರ. ಹೀಗಾಗಿ ಯಡಿಯೂರಪ್ಪ ಮನೆ ಬಳಿಯೇ ಗಿರಕಿ ಹೊಡೆಯುತ್ತಿದ್ದಾರೆ.
ಇದೇ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಆಪ್ತ ಶಾಸಕರಿಗೆ ಬುದ್ಧಿ ಮಾತು ಹೇಳಿದ್ದಾರೆ. "ಸಚಿವ ಸ್ಥಾನವನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡ್ತಾರೆ. ನಾನು ಏನೋ ಒಂದಿಬ್ಬರಿಗೆ ಹೇಳಬಹುದು. ಆದರೆ ನಾನು ಹಸ್ತಕ್ಷೇಪ ಮಾಡಲಾರೆ. ನನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತರಬೇಡಿ. ಸೌಹಾರ್ದಯುತವಾಗಿ ಮಾತನಾಡಿ ಹೋಗಿ, ನನ್ನ ಭೇಟಿ ಬಳಿಕ ಮಾಧ್ಯಮಗಳ ಮುಂದೆ ಸಚಿವ ಸ್ಥಾನದ ಬಗ್ಗೆ ಹೇಳಿಕೆ ಕೊಡಬೇಡಿ" ಎಂದು ತಿಳಿಹೇಳಿದ್ದಾರೆ.
PublicNext
30/07/2021 07:48 am