ಬೆಳಗಾವಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಇತರೆ ನಾಯಕರು ಕರ್ನಾಟಕದೊಂದಿಗೆ ಕಾಲು ಕೆರೆದು ಜಗಳ ತೆಗೆಯುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಇದರ ನಡುವೆಯೇ ಆ ರಾಜ್ಯದ ರಸ್ತೆ ಸಾರಿಗೆ ನಿಗಮವು ಕರ್ನಾಟಕದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅಧಿಕೃತವಾಗಿಯೇ ‘ಧಮ್ಕಿ ಹಾಕಿ ಪತ್ರ’ವೊಂದನ್ನು ಬರೆದಿರುವುದು ಬೆಳಕಿಗೆ ಬಂದಿದೆ.
ಮೀರಜ್ ನಗರದ ಶಾಸ್ತ್ರಿ ವೃತ್ತದಲ್ಲಿ ಬಸ್‌ಗಳ ನಿಲುಗಡೆಯೇ ಇಲ್ಲ. ಅಲ್ಲಿಗೆ ಬರುವ ಕರ್ನಾಟಕದ ‘ಪರ್ಮಿಟ್ ಇಲ್ಲದ’ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ. ಇದರಿಂದಾಗಿ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯದಿದ್ದರೆ ಫೆ.23ರಂದು ರಸ್ತೆ ತಡೆ ನಡೆಸಬೇಕಾಗುತ್ತದೆ’ ಎಂದು ಶಿವಸೇನೆ ಸಾಂಗ್ಲಿ ಜಿಲ್ಲಾ ಘಟಕ ಅಲ್ಲಿನ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ.
ಇದನ್ನು ಆಧರಿಸಿ ಅಲ್ಲಿಯ ಸಾರಿಗೆ ಅಧಿಕಾರಿಗಳು ವಾಯುವ್ಯ ಸಾರಿಗೆ ಚಿಕ್ಕೋಡಿ ವಿಭಾಗದ ಅಧಿಕಾರಿಗಳಿಗೆ ಫೆ. 18ರಂದು ಖಡಕ್ ಆಗಿಯೇ ಪತ್ರ ಬರೆದಿದ್ದಾರೆ.
‘ಪರ್ಮಿಟ್ ಇಲ್ಲದ’ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಬಾರದು. ಒಂದು ವೇಳೆ ಕಳುಹಿಸಿದಲ್ಲಿ ಶಿವಸೇನಾ ಪಕ್ಷದಿಂದಾಗುವ ಪರಿಣಾಮಗಳಿಗೆ ನೀವೇ ಹೊಣೆ ಆಗಬೇಕಾಗುತ್ತದೆ’ ಎಂಬ ಬೆದರಿಕೆ ದಾಟಿಯಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ಬರೆದಿದ್ದಾರೆ.
ಇದು ಖಂಡನೀಯ. ಕರ್ನಾಟಕದ ಸಾರಿಗೆ ನಿಗಮದಲ್ಲಿ ‘ಪರ್ಮಿಟ್ ಇಲ್ಲದ’ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೇ ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದೂ ಅಂತರರಾಜ್ಯ ಒಪ್ಪಂದಗಳ ಉಲ್ಲಂಘನೆಯೇ ಆಗುತ್ತದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಅವರು ಇದಕ್ಕೆ ಖಡಕ್ಕಾಗಿ ಪ್ರತ್ಯುತ್ತರ ನೀಡಲೆಬೇಕು ಇಲ್ಲವಾದರೆ ಕರ್ನಾಟಕ ಪ್ರವೇಶಿಸುವ ಮಹಾರಾಷ್ಟ್ರದ ಬಸ್ಸುಗಳಿಗೂ ಅದೇ ಪರಿಸ್ಥಿತಿ ಬರುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
PublicNext
22/02/2021 09:54 am