ಬೆಂಗಳೂರು: ಪಡೆದ ಗುತ್ತಿಗೆಯನ್ನು ಅನುಷ್ಠಾನಕ್ಕೆ ತರದೇ ಉಪಗುತ್ತಿಗೆ ಕೊಟ್ಟಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಕಟಿಸಿದ್ದಾರೆ. ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ, ಟೆಂಡರ್ ಪಡೆದವರು ಕೆಲಸ ಮಾಡುತ್ತಿಲ್ಲ, ಸಬ್ ಕಾಂಟ್ರ್ಯಾಕ್ಟ್ ಕೊಡುತ್ತಿದ್ದಾರೆ ಎನ್ನುವ ನಾರಾಯಣಸ್ವಾಮಿ ಹಾಗೂ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಟೆಂಡರ್ ಪಡೆದು ಮತ್ತೊಬ್ಬರಿಗೆ ಸಬ್ ಟೆಂಡರ್ ಕೊಟ್ಟಲ್ಲಿ ಗುಣಮಟ್ಟ ಹಾಳಾಗುತ್ತದೆ ಹಾಗಾಗಿ ಸಬ್ ಕಾಂಟ್ರಾಕ್ಟ್ ಕೊಟ್ಟಿದ್ದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೊರೊನಾದಿಂದ ಸಮಸ್ಯೆ ಆಗಿದೆ ಎನ್ನುವುದು ನಿಜ, ಆದರೂ ನಾವು ನಿಗದಿಪಡಿಸಿದ ಕಾಲದಲ್ಲಿಯೇ ಟೆಂಡರ್ ಕಾಮಗಾರಿ ಮುಗಿಸದೇ ಇದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಟೆಂಡರ್ ಅಮಾನತು ಮಾಡುವ ಹಾಗೂ ಸಬ್ ಟೆಂಟರ್ ಖಚಿತವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಭರವಸೆ ನೀಡಿದರು. ಟೆಂಡರ್ ಕರೆದು ಕೆಲಸ ಮಾಡಲು ಸಮಯವಾಗುವ ಕಾಮಗಾರಿಗಳು, ತುರ್ತು ಕಾರ್ಯ ಮಾಡಲು ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ರಚಿಸಲಾಗಿದೆ. ಅವುಗಳಲ್ಲಿ ಲೋಪದೋಷ ಒಪ್ಪಿಕೊಳ್ಳುತ್ತೇನೆ, ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
PublicNext
03/02/2021 09:36 pm