ವಾಷಿಂಗ್ಟನ್: ಟ್ವಿಟ್ಟರ್‌ಅನ್ನು ಖರೀದಿಸಿದ ನಂತರವಷ್ಟೇ ನಾನು ಟ್ವೀಟ್ ಮಾಡುತ್ತೇನೆಂದು ಪಣ ತೊಟ್ಟಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೊನೆಗೂ ಟ್ವಿಟ್ಟರ್ ಖರೀದಿಸಿದ್ದೂ ಆಯಿತು. ಅಲ್ಲಿ ಟ್ವೀಟ್ ಮಾಡಿದ್ದೂ ಆಯಿತು. ಈಗ ಹೊಸ ವಿಚಾರವೆಂದರೆ ವಿಶ್ವದ ದೊಡ್ಡಣ್ಣ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಸ್ಕ್ ನಡುವಿನ ಸ್ನೇಹ ಸಂಬಂಧ ಹಳಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವರಿಬ್ಬರ ನಡುವೆ ಟ್ವಿಟ್ಟರ್‌ನಲ್ಲಿ ವಾಕ್ಸಮರ ನಡೆಯುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಪರವೇ ಮತ ಚಲಾಯಿಸಿದ್ದಾಗಿ ಮಸ್ಕ್ ಸುಳ್ಳು ಹೇಳಿದ್ದಾರೆ ಎನ್ನುವುದು ಟ್ರಂಪ್ ಆರೋಪ.
ಇದಿಷ್ಟೇ ಅಲ್ಲ, “ನಾನೊಬ್ಬ ರಿಪಬ್ಲಿಕನ್ ಪಕ್ಷದ ಮತ್ತು ಟ್ರಂಪ್ ಅವರ ದೊಡ್ಡ ಅಭಿಮಾನಿ’ ಎಂದು ಮಸ್ಕ್ ಹೇಳಿಕೊಂಡಿದ್ದು, ಪ್ರತಿಯೊಂದು ವಿಷಯಕ್ಕೂ ನನ್ನ ಬಳಿ ಬಂದು ಭಿಕ್ಷೆ ಬೇಡುತ್ತಿದ್ದ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಮಸ್ಕ್ ವಿರುದ್ಧ ಹರಿಹಾಯ್ದಿರುವ ಟ್ರಂಪ್, “ನಾನು ಅಧ್ಯಕ್ಷನಾಗಿದ್ದಾಗ ಶ್ವೇತಭವನಕ್ಕೆ ಪದೇ ಪದೆ ಬಂದು, ತನ್ನ ಯೋಜನೆಗಳಿಗೆ ಸಬ್ಸಿಡಿ ನೀಡುವಂತೆ ಮಸ್ಕ್ ಬೇಡಿಕೊಳ್ಳುತ್ತಿದ್ದರು. ನಾನೇನಾದರೂ ಆಗ ಮಂಡಿಯೂರಿ ಬೇಡಿಕೋ ಎಂದಿದ್ದರೆ ಅದನ್ನೂ ಮಾಡುತ್ತಿದ್ದರು’ ಎಂದು ಬರೆದಿದ್ದಾರೆ. ಈ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, “ನಾನು ಆ ವ್ಯಕ್ತಿಯನ್ನು ದ್ವೇಷಿಸುವುದಿಲ್ಲ. ಆದರೆ, ಇದು ಟ್ರಂಪ್ ಅವರಿಗೆ ತನ್ನ ಹ್ಯಾಟ್ ಕೆಳಗಿಟ್ಟು, ಸೂರ್ಯಾಸ್ತದತ್ತ ಪಯಣಿಸುವ ಸಮಯ (ನಿವೃತ್ತಿ ಪಡೆಯುವ ಕಾಲ). ಟ್ರಂಪ್ ಬದುಕುಳಿಯಲು ಇರುವ ಏಕೈಕ ದಾರಿಯೆಂದರೆ ಮತ್ತೆ ಅಧ್ಯಕ್ಷ ಸ್ಥಾನಕ್ಕೇರುವುದು’ ಎಂದು ಟ್ವೀಟ್ ಮಾಡಿದ್ದಾರೆ.
PublicNext
14/07/2022 01:58 pm