ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸಿಡಿ ಕೇಸ್ ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಆರೋಪ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಇನ್ ಸ್ಪೆಕ್ಟರ್ ಮಾರುತಿ ವಿರುದ್ಧ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿದೆ.
ನಗರದ 8ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದ ಪ್ರತಿ ಲಭ್ಯವಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಂದಿಗೆ ರಾಸಲೀಲೆ ತೊಡಗಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿತ್ತು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮಾಜಿ ಸಚಿವ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ. ಇದು ಭಾರತೀಯ ಅಪರಾಧ ಸಂಹಿತೆ (ಐಪಿಸಿ) 166 (ಎ) ಅನ್ವಯ ಅಪರಾಧವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಆದರ್ಶ ಐಯ್ಯರ್ ಎಂಬುವರು ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಇದರಂತೆ ಕಮೀಷನರ್ ಕಮಲ್ ಪಂತ್, ಡಿಸಿಪಿ ಅನುಚೇತ್, ಇನ್‌ಸ್ಪೆಕ್ಟರ್ ಮಾರುತಿ ಅವರನ್ನು ಪ್ರತಿವಾದಿಗಳು ಮಾಡಿದ್ದು ಮೇಲ್ನೊಟಕ್ಕೆ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ. ಹೀಗಾಗಿ ಪ್ರತಿವಾದಿಗಳ ವಿರುದ್ಧ ತನಿಖೆ ನಡೆಸಬೇಕಾದ ಅಗತ್ಯವಿದೆ. ದೂರಿನಂತೆ ಪ್ರತಿವಾದಿಗಳ ವಿರುದ್ಧ ಸಿಆರ್ ಪಿಸಿ 156 (3)ಅನ್ವಯ ತನಿಖೆ ನಡೆಸುವಂತೆ ಕಬ್ಬನ್ ಪಾರ್ಕ್ ಪೊಲೀಸರಿಗೆ ನ.23 ರಂದು ಆದೇಶಿಸಿದೆ.
ಆದೇಶ ರದ್ದು ಕೋರಿ ಹೈಕೋರ್ಟ್ ಮೊರೆಹೋದ ಐಪಿಎಸ್ ಅಧಿಕಾರಿಗಳು
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ನ್ಯಾಯಾಲಯ ಆದೇಶ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ನಲ್ಲಿ ಗುರುವಾರ ವಿಚಾರಣೆ ಬರುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲಿ ಕರ್ತವ್ಯ ಲೋಪ ಎಸಗಿಲ್ಲ. ದೂರುದಾರರು ಸಂತ್ರಸ್ತೆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಸದ್ಯ ಪ್ರಕರಣ ಆರೋಪಿಯಾಗಿರುವ ಮಾಜಿ ಸಚಿವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಈ ಸದ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದು ಮಾಡುವಂತೆ ಆಯುಕ್ತರು ಹೈಕೋರ್ಟ್ ಮೊರೆ ಹೋಗಿದ್ದಾರೆ.
PublicNext
25/11/2021 12:31 pm