ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗವಣೆ ಮಾಡಿದ ಆರೋಪ ಎದುರಿಸುತ್ತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಸದ್ಯ ಬಂಧನ ಭೀತಿಯಲ್ಲಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮೂರು ದಿನಗಳಿಂದ ರಾಹುಲ್ ಗಾಂಧಿ ಅವರನ್ನು ಸತತ ವಿಚಾರಣೆಗೆ ಒಳಪಡಿಸಿದೆ. ಇತ್ತ ತಮ್ಮ ರಾಷ್ಟ್ರೀಯ ನಾಯಕನ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೈಗೊಂಡ ಕ್ರಮವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.
ಈ ನಡುವೆ ರಾಜ್ಯ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ಟ್ವೀಟ್ ಸಮರ ನಡೆಸಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳು ಬಿಜೆಪಿಯ ಬೇಟೆ ನಾಯಿಗಳು ಎಂದು ಕಿಡಿ ಕಾರಿದೆ.
'ಈ ದೇಶದ ಜನರ ಮನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ರಾಹುಲ್ ಗಾಂಧಿಯವರ ಬಗೆಗಿನ ಅಭಿಮಾನ ಭಾವ ಬಿಜೆಪಿಯ ನಿದ್ದೆಗೆಡಿಸಿದೆ. ಇದು ಹೀಗೆ ಮುಂದುವರೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ಮೋಸದ ಜಾಲ ಹೊರಬೀಳಲಿದೆ ಎಂದು ಭಯ ಬಿದ್ದಿರುವ ಬಿಜೆಪಿ ಈ ಕುತಂತ್ರ ರಾಜಕಾರಣಕ್ಕಿಳಿದಿದೆ. ಆದರೆ ಇದರಿಂದ ಹೋರಾಟಗಾರರ ವಂಶದ ಕುಡಿಯನ್ನು ಹೆದರಿಸಲಾಗದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್ ಹಗರಣ, ಪಿಎಂ ಕೇರ್ ಹಗರಣ, ಕೋವಿಡ್ ಹಗರಣ, ಪುಲ್ವಾಮ ಹಿಂದಿನ ರಹಸ್ಯ ಇವೆಲ್ಲವೂ ಬಯಲಾಗುತ್ತವೆ ಎಂಬ ಆತಂಕ ಬಿಜೆಪಿಗರಲ್ಲಿದೆ. ಹಾಗೇನಾದರೂ ಆದರೆ ಬಿಜೆಪಿಯ ನಾಯಕರು ಜೈಲು ಪರೇಡ್ ಮಾಡಬೇಕಾಗುತ್ತದೆ. ಇದರಿಂದ ದಿಗಿಲು ಬಿದ್ದಿರುವ ಬಿಜೆಪಿ ಈ ರೀತಿಯ ನೀಚ ರಾಜಕಾರಣದ ಮೊರೆ ಹೋಗಿದೆ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ಬಿಜೆಪಿಯ ಜನಾರ್ದನ ರೆಡ್ಡಿ 500 ಕೋಟಿಗೂ ಅಧಿಕ ಮೊತ್ತವನ್ನು ಖರ್ಚು ಮಾಡಿ ಮದುವೆ ಮಾಡಿದರೆ ಐಟಿ, ಇಡಿಗಳ ಕಣ್ಣಿಗೆ ಬೀಳುವುದಿಲ್ಲ. ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕಾಗುತ್ತದೆ ಎಂದಾಗ ತನಿಖೆ ಇಲ್ಲ. ಮಂತ್ರಿಗಿರಿಗೆ, ಶಾಸಕರ ಖರೀದಿಗೆ ಹಣದ ವಹಿವಾಟು ನಡೆದಾಗ ತನಿಖೆಯಾಗುವುದಿಲ್ಲ. ಐಟಿ, ಇಡಿಗಳೆಲ್ಲ ಬಿಜೆಪಿಯ ಬೇಟೆ ನಾಯಿಗಳು ಮಾತ್ರ! ಎಂದು ಟ್ವೀಟ್ ಮಾಡುರುವ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿಯ ಪ್ರಬುದ್ಧ ವಕ್ತಾರರು ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವರೇ ಎಂದು ಕೇಳಿದರುವ ರಾಜ್ಯ ಕಾಂಗ್ರೆಸ್, ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. FIR ಎಲ್ಲಿದೆ? ದಯವಿಟ್ಟು ಎಫ್‌ಐಆರ್‌ನ ಪ್ರತಿಯನ್ನು ನಮಗೆ ತೋರಿಸುತ್ತೀರಾ? ನಿಗದಿತ ಅಪರಾಧಕ್ಕೆ ಗೈರುಹಾಜರಾಗಿರುವುದು ಮತ್ತು ಎಫ್‌ಐಆರ್‌ಗೆ ಗೈರುಹಾಜರಾಗಿರುವುದಕ್ಕೆ, PMLA ಅಡಿಯಲ್ಲಿ ತನಿಖೆ ಮಾಡಲು ಜಾರಿ ನಿರ್ದೇಶನಾಲಯ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ನಿಮಗೆ ತಿಳಿದಿದೆಯೇ? PMLA ಅಡಿಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ED ತನಿಖೆಯನ್ನು ಪ್ರಚೋದಿಸಿದ 'ನಿಗದಿತ ಅಪರಾಧ' ಯಾವುದು? ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಯಾವ ಪೊಲೀಸ್ ಸಂಸ್ಥೆ ಎಫ್‌ಐಆರ್ ದಾಖಲಿಸಿದೆ?
ಇಂತಹ ತಾರ್ಕಿಕ ನಿಲುವಿನ ಪ್ರಶ್ನೆ ಕೇಳುವ ಮೂಲಕ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ವಾಕ್ ಪ್ರಜಹಾರ ನಡೆಸಿದೆ.
PublicNext
15/06/2022 11:23 am