ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೂ ವಿವಾದಕ್ಕೂ ತೀರಾ ಹತ್ತಿರದ ಸಂಬಂಧ. ಸದ್ಯ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ವಿರುದ್ಧ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ.
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರೋ ದ್ರೌಪದಿ ಮುರ್ಮು ಬಗ್ಗೆ ರಾಮ್‌ಗೋಪಾಲ್ ವರ್ಮಾ ಜೂನ್ 22ರಂದು ಅವಹೇಳನಕಾರಿ ಟ್ವೀಟ್ ಮಾಡಿದ್ದರು. "ದ್ರೌಪದಿ ರಾಷ್ಟ್ರಪತಿಯಾದ್ರೆ, ಹಾಗಾದ್ರೆ ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದು ಅವಹೇಳನಕಾರಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿ ಬಿಜೆಪಿ ನಾಯಕರು ಪೊಲೀಸ್ ಕಂಪ್ಲೇಟ್ ನೀಡಿದ್ದಾರೆ. ಹೈದ್ರಾಬಾದ್ ಬಿಜೆಪಿ ನಾಯಕ ನಾರಾಯಣ ರೆಡ್ಡಿ, ಅಬಿಡ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಆರ್‌ಜಿವಿ ವಿರುದ್ಧ ಎಸ್‌ಸಿ-ಎಸ್‌ಟಿ ಕಾನೂನಿನ ಅಡಿ ಅಟ್ರಾಸಿಟಿ ಕೇಸ್ ಹಾಕುವಂತೆ ದೂರು ದಾಖಲಿಸಿದ್ದಾರೆ.
ತಮ್ಮ ಟ್ವೀಟ್‌ಗೆ ಸ್ಪಷ್ಟನೆ ನೀಡಿರುವ ಆರ್‌ಜಿವಿ, "ಈ ಹೇಳಿಕೆಯನ್ನ ನಾನು ಕೇವಲ ವ್ಯಂಗ್ಯವಾಗಿ ಹೇಳಿದ್ದೆ. ಇದರ ಹಿಂದೆ ಯಾವುದೇ ರೀತಿಯ ಉದ್ದೇಶವಿಲ್ಲ. ದ್ರೌಪದಿ ಮಹಾಭಾರತದಲ್ಲಿರೋ ನನ್ನ ಅಚ್ಚುಮೆಚ್ಚಿನ ಪಾತ್ರ. ಈ ಹೆಸರು ಅಪರೂಪವಾಗಿದ್ದರಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆ ಹೆಸರಿಗೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ" ಎಂದು ಹೇಳಿದ್ದಾರೆ.
PublicNext
25/06/2022 08:26 am