ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಹೀಗಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿರುವುದು ಸಾರ್ವಜನಿಕರ ಶಂಕೆಗೆ ಕಾರಣವಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಗೋಮಾಳಗಳಲ್ಲಿ ಅಕ್ರಮವಾಗಿ ಗುಡ್ಡ ಬೆಟ್ಟಗಳಲ್ಲಿ ಕಲ್ಲು ತೆಗೆಯುವ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಕಲ್ಲು ಬಂಡೆಗಳಲ್ಲಿ ಕ್ವಾರಿಯವರಿಗೆ ಕಲ್ಲು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿಯನ್ನು ಪಡೆಯುವುದರ ಜೊತೆಗೆ ಸಂಬಂಧ ಪಟ್ಟ ಇಲಾಖೆಗೆ ಗೌರವಧನವನ್ನು ಪಾವತಿಸಿರಬೇಕು. ಆನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಪರವಾನಗಿ ಪಡೆದ ವ್ಯಕ್ತಿಗಳಿಗೆ ಇಂತಿಷ್ಟು ವ್ಯಾಪ್ತಿ ಎಂದು ಗಡಿಯನ್ನು ಗುರುತಿಸಿ ಕೊಟ್ಟಿರುತ್ತಾರೆ. ಆ ಜಾಗದಲ್ಲಿ ಮಾತ್ರ ಕಲ್ಲುಗಳನ್ನು ತೆಗೆಯಬಹುದು. ಆದರೆ ಬೆಟ್ಟಗುಡ್ಡಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಿ ಕಲ್ಲು ತೆಗೆಯುತ್ತಿದ್ದಾರೆ.
ಆದರಹಳ್ಳಿ ಗ್ರಾಮದಲ್ಲಿ ಕೆಲವೊಂದು ಕ್ವಾರಿಗಳಿಗೆ ಪರವಾನಿಗೆ ನೀಡಲಾಗಿದೆ. ಪರವಾನಿಗಿ ನೀಡಿದ ಜಾಗ ಬಿಟ್ಟು ಬಿಕಾಬಿಟ್ಟಿ ಎಲ್ಲೆಂದರಲ್ಲಿ ಕಲ್ಲು ತೆಗೆಯುತ್ತಿದ್ದಾರೆ. ಆದರೆ ಇಲ್ಲಿ ಸುಮಾರು ಮಂದಿ ಅಕ್ರಮವಾಗಿ ಕಲ್ಲುಗಳನ್ನು ತೆಗೆಯುತ್ತಿದ್ದಾರೆ. ಅಕ್ರಮವಾಗಿ ತೆಗೆದ ಕಲ್ಲುಗಳನ್ನು ಲಾರಿ ಟಿಪ್ಪರ್ ಮೂಲಕ ರಾಜಾರೋಷವಾಗಿ ಸಾಗಿಸುತ್ತಿದ್ದಾರೆ. ಕಣ್ಣು ಮುಂದೆಯೇ ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇಲ್ಲಿ ನಡೆಯುತ್ತಿರುವುದೆಲ್ಲವೂ ಅಕ್ರಮವಾಗಿರುವುದರಿಂದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಪರಿಸರದ ಮೇಲೆ ಅಪಾರ ಪರಿಣಾಮ ಬೀರುತ್ತಿದೆ.
ವರದಿ: ಸುರೇಶ ಲಮಾಣಿ, ಪಬ್ಲಿಕ್ ನೆಕ್ಸ್ಟ ಗದಗ
PublicNext
27/07/2022 06:49 pm