ಬೆಂಗಳೂರು: ಕಾಂಗ್ರೆಸ್ ತೊರೆಯುವ ಹಾದಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಸೋಮವಾರ ಬೆಳಿಗ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪದ್ಮನಾಭನಗರದ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಇಬ್ರಾಹಿಂ, ಕೆಲಕಾಲ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಶಾಸಕ ಆರ್. ಮಂಜುನಾಥ್, ಮಾಜಿ ಶಾಸಕ ಸುರೇಶ್ ಬಾಬು ಈ ಸಂದರ್ಭದಲ್ಲಿ ಇದ್ದರು.
ಚರ್ಚೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ರಾಹಿಂ, ‘ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ. ತಂದೆ ಎಂದಾದರೂ ಮಗನಿಗೆ ಬೇಡ ಅಂತಾರಾ? ನಾಳೆಯಿಂದ ರಾಜ್ಯ ಪ್ರವಾಸ ಆರಂಭಿಸುವೆ. ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಬಂದು ಮಾತುಕತೆ ನಡೆಸಿದ್ದಾರೆ. ಇತ್ತ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರು ಮಾತನಾಡಿದ್ದಾರೆ. ಜನರ ಬಳಿ ಹೋಗಿ ಎರಡನ್ನೂ ತಿಳಿಸುವೆ. ಅವರು ಹೇಗೆ ಹೇಳ್ತಾರೋ ಹಾಗೆ ಮಾಡುವೆ ಎಂದು ತಿಳಿಸಿದರು.
ಕಾಂಗ್ರೆಸ್ ಪೋಸ್ಟರ್ನಲ್ಲಿ ಎಲ್ಲೂ ಸಾಬರ ಫೋಟೋ ಇಲ್ಲ ಯಾಕೆ? ಎಲ್ಲರೂ ಕುಳಿತಿದ್ದಾರೆ, ನಾವು ನಿಂತಿದ್ದೇವೆ. ನಮಗೆ ಯಾವ ಸ್ಥಾನ ಕೊಡಬೇಕೋ ಅದನ್ನ ಕೊಡಿ ಅಂತ ಅಂದಿನಿಂದಲೂ ಕೇಳಿದ್ದೇನೆ ಎಂದು ಹೇಳಿದರು.
PublicNext
14/12/2020 04:11 pm