ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಶಿವಸೇನೆ ಈ ರೀತಿ ಹೇಳಿಕೆ ನೀಡಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ, "ಅಧ್ಯಕ್ಷ ಟ್ರಂಪ್ ಎಂದಿಗೂ ರಾಷ್ಟ್ರದ ಅಧ್ಯಕ್ಷ ಪಟ್ಟಕ್ಕೆ ಅರ್ಹರಾದ ವ್ಯಕ್ತಿಯಲ್ಲ. ಅಮೆರಿಕದ ನಾಗರಿಕರು ತಾವು ನಾಲ್ಕು ವರ್ಷದ ಹಿಂದೆ ಮಾಡಿದ್ದ ತಪ್ಪನ್ನು ಈಗ ಸರಿಪಡಿಸಿದ್ದಾರೆ. ಟ್ರಂಪ್ ಗೆ ಒಂದೇ ಒಂದು ಭರವಸೆ ಪೂರೈಸಲಾಗಿಲ್ಲ. ನಾವೂ ಸಹ ಟ್ರಂಪ್ ಸೋಲಿನಿಂದ ಕಲಿತರೆ ಒಳ್ಳೆಯದಾಗಲಿದೆ" ಎಂದಿದೆ.
ಅಮೆರಿಕಾದಲ್ಲಿ ನಿರುದ್ಯೋಗ ಸಾಂಕ್ರಾಮಿಕ ಕೋವಿಡ್ ಗಿಂತ ಹೆಚ್ಚಾಗಿದೆ. ಹಾಗಿದ್ದರೂ ಟ್ರಂಪ್ ಸಮಸ್ಯೆ ಬಗೆಹರಿಸುವುದರ ಬದಲಾಗಿ ಅಸಂಬದ್ಧ ಹೇಳಿಕೆ, ರಾಜಕೀಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಶಿವಸೇನೆ ಹೇಳಿದೆ. "ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರದಲ್ಲಿ ಅಧಿಕಾರವು ಅದೇ ಹಾದಿಯಲ್ಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸ್ಪಷ್ಟವಾಗಿ ಸೋಲು ಅನುಭವಿಸಿದೆ. ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನು ಹೊರತುಪಡಿಸಿ ಬೇರೆ ಪರ್ಯಾಯಗಳಿಲ್ಲ ಎಂಬ ಭ್ರಮೆಯಿಂದ ಕೂಡಿರುವ ನಾಯಕರನ್ನು ಮನೆಗೆ ಕಳಿಸುವ ಕೆಲಸವನ್ನು ಜನರು ಮಾಡಬೇಕಾಗಿದೆ" ಎಂದು ಹೇಳಿದೆ.
PublicNext
09/11/2020 03:39 pm