ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ 'ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ'ಯನ್ನು ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟಿಸಿದರು.
ಬಳಿಕ ಪ್ರತಾಪ್ ಸಿಂಹ ಅವರು ಮಾತನಾಡಿ, ನಾಡಹಬ್ಬ ದಸರಾ ಹಬ್ಬದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ಹೊಂದಿದ್ದು, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ ಎಂದರು.
ಎರಡು ವರ್ಷಗಳಿಂದ ಕೋವಿಡ್, ನೆರೆಯ ಕಾರಣದಿಂದ ಅದ್ಧೂರಿ ದಸರಾ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಸಿಎಂ ಒಪ್ಪಿಗೆ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆಯೋಜನೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಆಗಮನ ಹಾಗೂ ಯುವದಸರಾವನ್ನು ಅಪ್ಪು ನಮನವಾಗಿ ಆಚರಣೆಯು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಿಟಿ ಆಫ್ ಯೋಗ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಬೇಕು ಎಂಬ ಆಸೆಯು ಅಂತಾರಾಷ್ಟ್ರೀಯ ಯೋಗಾದಿನದಂದು ನೆರವೇರಿತು. ಮುಂದಿನ ದಿನಗಳಲ್ಲಿ ಯೋಗಕ್ಕೆ ಮೈಸೂರಿನಲ್ಲಿ ಮತ್ತಷ್ಟು ಒತ್ತು ನೀಡುವ ಮೂಲಕ ಯೋಗವನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ.ಆರೋಗ್ಯಯುತ ಜೀವನಕ್ಕೆ ಯೋಗವು ಸಹಕಾರಿಯಾಗಿದ್ದು, ಪೋಷಕರು ಮಕ್ಕಳಿಗೆ ಯೋಗ ಕಲಿಸಲು ಹೆಚ್ಚಿನ ಆಸಕ್ತಿ ತೋರಿಸುವಂತೆ ತಿಳಿಸಿದರು.
ವೇದಿಕೆ ಆರಂಭದಲ್ಲಿ ನಾಲ್ಕು ಯೋಗಾಪಟುಗಳು ಯೋಗಾಪ್ರದರ್ಶನ ಮಾಡಿದರು. ವಿಶೇಷಚೇತನರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಈ ಸಂದರ್ಭ ದಸರಾ ಯೋಗಾ ಉಪಸಮಿತಿ ಅಧ್ಯಕ್ಷರಾದ ಬಾಲಕೃಷ್ಣ, ಜಂಗಲ್ ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ, ಯೋಗದಸರಾ ಉಪವಿಶೇಷಾಧಿಕಾರಿ ಸೀಮಂತಿನಿ, ಯೋಗಾ ಫೌಂಡೇಶನ್ ಕಾರ್ಯದರ್ಶಿ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.
Kshetra Samachara
29/09/2022 01:50 pm