ಮುಲ್ಕಿ: ದೀಪಾವಳಿ ದಿನದಂದು ಭಾನುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಮೆಸ್ಕಾಂ ಪವರ್ ಕಟ್ ಮಾಡಿದ್ದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಯಿತು.
ದೀಪಾವಳಿಯ ಶುಭದಿನದಂದು ಮುಲ್ಕಿ ಕಿನ್ನಿಗೋಳಿ ಪರಿಸರದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಗೆ ಹೋದ ವಿದ್ಯುತ್ ಸಂಜೆ ಬರುವಾಗ ಬರೋಬರಿ 4:30 ದಾಟಿತ್ತು. ಈ ನಡುವೆ ಕೆಲವು ಕಡೆ ಪುನಹ ಸಂಜೆ ಐದು ಗಂಟೆ ಬಳಿಕ ಎರಡನೇ ಬಾರಿ ಪವರ್ ಕಟ್ ಮಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಭಾನುವಾರದ ದಿನ ದೀಪಾವಳಿಯಂದು ಬಂಧುಮಿತ್ರರು ಮನೆಯಲ್ಲಿರುವಾಗ ಏಕಾಏಕಿ ವಿದ್ಯುತ್ ಸ್ಥಗಿತಗೊಂಡಿರುವ ಬಗ್ಗೆ ಗ್ರಾಹಕರು ಮುಲ್ಕಿ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ನಡುವೆ ಮುಲ್ಕಿ ಮೆಸ್ಕಾಂ ಕಚೇರಿಯ ದೂರವಾಣಿ ಸ್ಥಗಿತಗೊಂಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ವಿದ್ಯುತ್ ಕಡಿತಗೊಂಡಿರುವ ಬಗ್ಗೆ ಮುಲ್ಕಿ ಬಿಜೆಪಿಯ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿಠಲ್ ಎನ್.ಎಂ. ಆಕ್ರೋಶ ವ್ಯಕ್ತಪಡಿಸಿ, ಮುಲ್ಕಿ ಮೆಸ್ಕಾಂ ಇಲಾಖೆ ದೀಪಾವಳಿ ದಿನದಂದು ಪವರ್ ಕಟ್ ಮೂಲಕ ಗ್ರಾಹಕರಿಗೆ ಉತ್ತಮ ಉಡುಗೊರೆ ನೀಡಿದೆ ಎಂದು ವ್ಯಂಗ್ಯವಾಡಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಬೇಜವಾಬ್ದಾರಿಯಿಂದ, ಲಜ್ಜೆಗೇಡಿತನದಿಂದ ವರ್ತಿಸಿದ್ದಾರೆ ಈ ಬಗ್ಗೆ ಶಾಸಕರಿಗೆ, ಸಂಸದರಿಗೆ ದೂರು ನೀಡಲಾಗುವುದು ಎಂದರು.
ಮುಲ್ಕಿ ಮೆಸ್ಕಾಂ ಶಾಖಾಧಿಕಾರಿ ವಿವೇಕಾನಂದ ಶೆಣೈ ಅವರನ್ನು ಸಂಪರ್ಕಿಸಿದಾಗ ಮುಲ್ಕಿಯ ಕೊಲ್ನಾಡು ಸಬ್ ಸ್ಟೇಷನ್ ನಲ್ಲಿ ಸಮಸ್ಯೆ ಬಂದ ಕಾರಣ ವಿದ್ಯುತ್ ಸ್ಥಗಿತಗೊಂಡಿದ್ದು, ಗ್ರಾಹಕರಿಗೆ ಆದ ತೊಂದರೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
Kshetra Samachara
15/11/2020 08:49 pm