ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರ ಉಡಾಫೆ ವರ್ತನೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ, ಮತ್ತಿತರ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಸಭೆ ಶುರುವಾಗುತ್ತಿದ್ದಂತೆ ಮುಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ಪರವಾಗಿ ಬಂದ ಸಿಬ್ಬಂದಿಯನ್ನು ನಗರ ಪಂಚಾಯತ್ ಸದಸ್ಯರುಗಳಾದ ನರಸಿಂಹ ಪೂಜಾರಿ, ಪುತ್ತು ಬಾವ, ಮಂಜುನಾಥ ಕಂಬಾರ, ತೀವ್ರ ತರಾಟೆಗೆ ತೆಗೆದುಕೊಂಡು ವೈದ್ಯಾಧಿಕಾರಿಯ ಉಡಾಫೆ ವರ್ತನೆ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಸಭೆಗೆ ವೈದ್ಯಾಧಿಕಾರಿಗಳು ಯಾಕೆ ಬರುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು
ಸದಸ್ಯ ಹರ್ಷರಾಜ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಆನೆಕಾಲು ರೋಗದ ಪರೀಕ್ಷೆ ಮತ್ತು ಮದ್ದು ಯಾಕೆ ಇಲ್ಲ? ಮುಲ್ಕಿ ತಾಲೂಕಾಗಿ ಮೇಲ್ದರ್ಜೆಗೇರಿಸಿದರೂ ಚಿಕಿತ್ಸೆಗಳು ಯಾಕೆ ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ ಮಾತನಾಡಿ ಈ ಬಗ್ಗೆ ಶಾಸಕರಿಗೂ ದೂರು ನೀಡಲಾಗಿದೆ ಎಂದರು.
ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸ್ಪಷ್ಟನೆ ನೀಡಿ ಮುಂದಿನ ದಿನಗಳಲ್ಲಿ ಆಸ್ಪತ್ರೆ ವೈದ್ಯರು ಸಭೆಗೆ ಬರಬೇಕು ಹಾಗೂ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸೋಣ ಎಂದು ಹೇಳಿ ಸದಸ್ಯರುಗಳನ್ನು ಸಮಾಧಾನಪಡಿಸಿದರು.
ಮುಲ್ಕಿ ನಗರ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ಸದಸ್ಯ ಹರ್ಷರಾಜ ಶೆಟ್ಟಿ ಪ್ರಸ್ತಾಪಿಸಿ ಕೂಡಲೇ ಸರಿಪಡಿಸುವಂತೆ ಮನವಿ ಮಾಡಿದರು.
ನಗರ ಪಂಚಾಯತಿ ವ್ಯಾಪ್ತಿಯ ಚಿತ್ರಾಪು ಗಜನಿ,ಕೊಕ್ಕರಕಲ್ ಪ್ರದೇಶದಲ್ಲಿ, ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ಅಪಾಯದ ಸ್ಥಿತಿಯಲ್ಲಿದೆ, ಫ್ಲೆಕ್ಸ್ ತೆರವುಗೊಳಿಸುವಲ್ಲಿ ತಾರತಮ್ಯ, ಕೋಲ್ನಾಡು ಜಂಕ್ಷನ್ ಬಳಿ ಅಮರನಾಥ ಶೆಟ್ಟಿ ಬಡಾವಣೆ ನಾಮಫಲಕ ಅಳವಡಿಸುವ ಬಗ್ಗೆ ಯೋಗೀಶ್ ಕೋಟ್ಯಾನ್, ಈರಣ್ಣ ಅರಳಗುಂಡಗಿ ಮತ್ತಿತರರು ಚರ್ಚೆ ನಡೆಸಿದರು ಜಿಲ್ಲಾಧಿಕಾರಿಗಳ ಮುಲ್ಕಿ ಭೇಟಿ ಬಗ್ಗೆ ನಗರ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಪುತ್ತು ಬಾವ ಆಕ್ರೋಶ ವ್ಯಕ್ತಪಡಿಸಿದರು, ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ ಶೌಚಾಲಯದ ಬಳಿ ಪುಂಡು ಪೋಕರಿಗಳ ಹಾವಳಿ ಜಾಸ್ತಿಯಾಗಿದ್ದು ನಿಯಂತ್ರಿಸಲು ಸದಸ್ಯ ಸಂತೋಷ್ ದೇಸುಣಿಗಿ ಒತ್ತಾಯಿಸಿದರು.
Kshetra Samachara
29/09/2022 05:52 pm