ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ನಗರ ಪಂಚಾಯತ್ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ಉದ್ಯಾನವನಕ್ಕೆ ಡಾ. ಬಾಬು ಜಗಜೀವನ್ ರಾಮ್ ಹೆಸರು ಇಡಬೇಕು ಎಂದು ನಿರ್ಣಯ ಮಾಡಲಾಗಿದ್ದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಸದಸ್ಯ ಮಂಜುನಾಥ ಕಂಬಾರ ಆಕ್ರೋಶ ವ್ಯಕ್ತಪಡಿಸಿದರು.
ಮುಲ್ಕಿ ನ ಪಂ ಗೆ ಶಾಸಕರು ವಿಶೇಷ ಅನುದಾನ ಯಾಕೆ ನೀಡಿಲ್ಲ? ಕೇವಲ ಮೂಡಬಿದ್ರೆಗೆ ಅನುದಾನ ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸದಸ್ಯ ಪುತ್ತು ಭಾವ ಆರೋಪಿಸಿದರು. ಅವರು ಮಾತನಾಡಿ ನಪಂ ವ್ಯಾಪ್ತಿಯ ಕಾರ್ನಾಡ್ ಬಳಿ ಒಳಚರಂಡಿ ಅವ್ಯವಸ್ಥೆಯಿಂದ ಕೃತಕ ನೆರೆ ಉಂಟಾಗುತ್ತಿದೆ, ನಗರ ಪಂಚಾಯಿತಿಯಿಂದ ಕಟ್ಟಡಕ್ಕೆ ಹಾಗೂ ಅಂಗಡಿಗೆ ಪರವಾನಿಗೆ ನೀಡುವಾಗ ಎಚ್ಚರ ವಹಿಸಬೇಕು ಎಂದರು.
ಮುಲ್ಕಿ ನ ಪಂ ಹಾಗೂ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಸಮಸ್ಯೆ ಕಾಡುತ್ತಿದ್ದು ನೇಮಕಕ್ಕೆ ಸದಸ್ಯ ಯೋಗೀಶ್ ಕೋಟ್ಯಾನ್ ಒತ್ತಾಯಿಸಿದರು.
ನ ಪಂ ವ್ಯಾಪ್ತಿಯಲ್ಲಿ ಜು.1 ರಿಂದ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿದ್ದು ಗ್ರಾಹಕರ ಹಾಗೂ ಅಂಗಡಿ ಮಾಲೀಕರ ಸಹಕಾರ ಅಗತ್ಯ ಎಂದು ಮುಖ್ಯಾಧಿಕಾರಿ ಚಂದ್ರಪೂಜಾರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಕ್ಷೀರ ಸಾಗರ ಬಳಿ ಚತುಷ್ಪಥ ಸರ್ವಿಸ್ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು ಅರ್ಧಂಬರ್ಧ ಕಾಮಗಾರಿ ನಡೆಸಿ ಹೋಗಿದ್ದಾರೆ, ಈ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರರು ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸರಿಪಡಿಸದಿದ್ದರೆ ಹೆದ್ದಾರಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ಲಯನ್ಸ್ ಸಂಸ್ಥೆಯಿಂದ ಒದಗಿಸಿದ ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ಸದಸ್ಯ ಬಾಲಚಂದ್ರ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗಪ್ಪಯ್ಯ ಕಾಡು ವ್ಯಾಪ್ತಿಯಲ್ಲಿ ತೋಡಿನ ಹೂಳೆತ್ತುವ ಬಗ್ಗೆ ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ, ಮನೆಮನೆ ಕಸ ವಿಲೇವಾರಿ ಇನ್ನೂ ಆರಂಭಗೊಂಡಿಲ್ಲ, 15ನೇ ವಾರ್ಡಿನಲ್ಲಿ ಅಂಗನವಾಡಿ ಪ್ರಾರಂಭದ ಬಗ್ಗೆ ಏನಾಯಿತು? ಎಂದು ಮಂಜುನಾಥ ಕಂಬಾರ, ಈರಣ್ಣ ಅರಳಗುಂಡಿ ಪ್ರಶ್ನಿಸಿದರು.
ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಲಕ್ಷ್ಮಿ ಯವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
Kshetra Samachara
30/06/2022 04:39 pm