ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮುಲ್ಕಿಗೆ ನೂತನ ಬಸ್ ನಿಲ್ದಾಣ, ನಗರ ಪಂಚಾಯತ್ ಸಿಬ್ಬಂದಿ ಕೊರತೆ, ಕಾರ್ನಾಡು ಹೋಟೆಲ್ ತ್ಯಾಜ್ಯ ನೀರು ರಸ್ತೆಗೆ ಬಿಟ್ಟು ದುರ್ವಾಸನೆ, ಕಾರ್ನಾಡು ಮೀನು ಮಾರುಕಟ್ಟೆ ಅವ್ಯವಸ್ಥೆ, ಲಿಂಗಪ್ಪಯ್ಯಕಾಡು ಶೌಚಾಲಯದಿಂದ ದುರ್ವಾಸನೆ, ಚರಂಡಿಯ ಹೂಳೆತ್ತುವ ಕಾಮಗಾರಿ ಬಗ್ಗೆ ಅನೇಕ ಚರ್ಚೆಗಳು ನಡೆಯಿತು.
ಸಭೆ ಶುರುವಾಗುತ್ತಿದ್ದಂತೆ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ ವಸತಿರಹಿತರಿಗೆ ಸೂರು ಹಾಗೂ ಮುಲ್ಕಿಗೆ ನೂತನ ಬಸ್ಸು ನಿಲ್ದಾಣ ಏನಾಯಿತು ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಬಳಿ ಕೇಳಿದರು ಇದಕ್ಕೆ ಶಾಸಕರು ಉತ್ತರಿಸಿ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಎಕರೆ ಸರಕಾರಿ ಜಾಗ ಗುರುತಿಸಲಾಗಿದ್ದು ವಸತಿಹೀನರಿಗೆ ದೊರಕಿಸಿಕೊಡಲು ಪ್ರಯತ್ನ ನಡೆಯುತ್ತಿದೆ ,ಮುಲ್ಕಿಗೆ ಶೀಘ್ರ ಬಸ್ಸುನಿಲ್ದಾಣ, 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ, ಕಾರ್ನಾಡು ಬೈಪಾಸ್ ಬಳಿ 2 ಕೋಟಿ ವೆಚ್ಚದಲ್ಲಿ ನೂತನ ಪ್ರವಾಸಿ ಮಂದಿರ, 5ಕೋಟಿ ನಗರೋತ್ಥಾನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದರು.
ಈ ನಡುವೆ ನಪಂ ಸದಸ್ಯ ಪುತ್ತುಬಾವ ಮಾತನಾಡಿ ಮುಲ್ಕಿ ನಪಂ ಸಹಿತ ಸರಕಾರಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು ಶಾಸಕರು ಮುಲ್ಕಿಯನ್ನು ಕಡೆಗಣಿಸುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದೆ ಎಂದರು.
ನಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವಾಗ ಆಯಾ ವಾರ್ಡಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪುತ್ತುಬಾವ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ಗುಂಡಾಲು ಗುತ್ತು ಬಳಿ ಹೆದ್ದಾರಿ ಕೊಳಚೆನೀರು ತೋಟಕ್ಕೆ ಬರುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಹರ್ಷ ರಾಜ ಶೆಟ್ಟಿ ಆಗ್ರಹಿಸಿದರು.
ಕಾರ್ನಾಡು ಹೋಟೆಲ್ ನ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಈ ಬಗ್ಗೆ ಅನೇಕ ಬಾರಿ ನಪಂ ಗೆ ದೂರು ನೀಡಿ ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದರೂ ಸರಿಯಾಗಿಲ್ಲ. ತೆರೆದ ಸ್ಥಿತಿಯಲ್ಲಿ ತ್ಯಾಜ್ಯ ನೀರನ್ನುಪಂಪ್ ಮಾಡಿ ರಸ್ತೆಗೆ ಬಿಡುತ್ತಿದ್ದಾರೆ ಕೂಡಲೇ ಹೋಟೆಲ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪುತ್ತುಬಾವ ಆಗ್ರಹಿಸಿದರು. ಇದಕ್ಕೆ ಮುಖ್ಯಾಧಿಕಾರಿ ಚಂದ್ರಪೂಜಾರಿ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ದುರಸ್ತಿಗೊಂಡ ಕಾರ್ನಾಡ್ ಮೀನುಮಾರುಕಟ್ಟೆ ಅವ್ಯವಸ್ಥೆಗಳ ಆಗರವಾಗಿದೆ ಎಂದು ಸದಸ್ಯ ಪುತ್ತುಬಾವ ಹೇಳಿದರು. ನ.ಪಂ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ, ಚರಂಡಿಯ ಹೂಳೆತ್ತುವ ಕೆಲಸ ಇನ್ನೂ ಆಗಿಲ್ಲ, ಶೌಚಾಲಯ ದುರ್ವಾಸನೆ ಬೀರುತ್ತಿದ್ದು ಮದ್ಯವ್ಯಸನಿಗಳ, ದುಷ್ಕರ್ಮಿಗಳ ತಾಣವಾಗಿದೆ ಎಂದು ಸದಸ್ಯರಾದ ಮಂಜುನಾಥ ಕಂಬಾರ,ಈರಣ್ಣ ಅರಳಗುಂಡಿ, ಸಂತೋಷ್ ದೇಸುಣಿಗಿ ದೂರಿದರು.
ಮುಲ್ಕಿ ಬಸ್ ನಿಲ್ದಾಣದ ಕೆಳ ಬದಿಯ ಬದಿಯ ಆರಾರ್ ಟವರ್ಸ್ ಬಳಿ ನಿಲ್ದಾಣದ ಹೋಟೆಲ್ ಹಾಗೂ ಇತರೆ ಅಂಗಡಿಗಳ ತ್ಯಾಜ್ಯ ನೀರು ಸಂಗ್ರಹವಾಗುತ್ತಿದ್ದು ರೋಗಗಳ ಭೀತಿ ಎದುರಾಗಿದೆ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಬಾಲಚಂದ್ರ ಕಾಮತ್ ದೂರಿದರು.
ನಗರ ಪಂಚಾಯಿತಿ ನೂತನ ಸ್ಥಾಯಿ ಸಮಿತಿಯ ಸದಸ್ಯರಾಗಿ ಹರ್ಷ ರಾಜಶೆಟ್ಟಿ, ವಂದನ ಕಾಮತ್, ಲಕ್ಷ್ಮಿ, ರಾಧಿಕಾ, ವಿಮಲಾ ಪೂಜಾರಿ, ಮುನ್ನ ಯಾನೆ ಮಹೇಶ್, ಸಂದೀಪ್ ರವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರ ಆಯ್ಕೆ ಮುಂದಿನ ಸಭೆಯಲ್ಲಿ ಎಂದು ತೀರ್ಮಾನಿಸಲಾಯಿತು.
Kshetra Samachara
31/05/2022 02:08 pm