ಮೂಡುಬಿದಿರೆ: ಬೆಂಗಳೂರಿನ ಜೈನ್ ಯೂನಿವರ್ಸಿಟಿ ಆಶ್ರಯದಲ್ಲಿ ಏ. 21 ರಿಂದ ಮೇ 3ರವರೆಗೆ ನಡೆಯಲಿರುವ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 71 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದರು. ಅವರು ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ಬಾರಿಯ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಸಾಧನೆ ಮೆರೆದ ಕ್ರೀಡಾಪಟುಗಳು ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಒಟ್ಟು 41 ವಿದ್ಯಾರ್ಥಿಗಳು, ಮಹಿಳಾ ಕಬಡ್ಡಿಯಲ್ಲಿ 9 ವಿದ್ಯಾರ್ಥಿಗಳು, ಪುರುಷರ ವಾಲಿಬಾಲ್‌ನಲ್ಲಿ 7 ವಿದ್ಯಾರ್ಥಿಗಳು, ಮಹಿಳೆಯರ ಹಾಕಿಯಲ್ಲಿ 3, ಮಹಿಳೆಯರ ವೈಟ್ ಲಿಫ್ಟಿಂಗ್ ನಲ್ಲಿ 3 ಮಂದಿ, ಮಹಿಳೆಯರ ಕುಸ್ತಿಯಲ್ಲಿ 2 ಹಾಗೂ 6 ಮಂದಿ ಮಲ್ಲಕಂಬ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಲಿದ್ದು, ಇವರೆಲ್ಲರೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೊಸದಾಗಿ ಸೇರ್ಪಡೆಗೊಂಡ ದೇಶಿಯ ಕ್ರೀಡೆಯಲ್ಲೊಂದಾಗಿರುವ ಮಲ್ಲಕಂಬ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿಶ್ವವಿದ್ಯಾಲಯವಾಗಿದ್ದು, ಈ ತಂಡವನ್ನು ಪ್ರತಿನಿಧಿಸಲಿರುವ ಎಲ್ಲಾ ಆರು ಮಂದಿ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಎಲ್ಲಾ 71 ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಡಿ, ಉಚಿತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.
Kshetra Samachara
20/04/2022 11:18 am