ಸುಬ್ರಹ್ಮಣ್ಯ: "ಸಪ್ತಪದಿ" ಪ್ರತಿ ತಿಂಗಳಿಗೆ ಎರಡು ದಿವಸ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಹನ್ನೊಂದನೇ ರಾಜ್ಯ ಧಾರ್ಮಿಕ ಪರಿಷತ್ ಸಭೆಯ ಬಳಿಕ ಅವರು ವರದಿಗಾರರ ಜೊತೆಗೆ ಮಾತನಾಡಿದರು. ಫೆಬ್ರವರಿ 17 ಮತ್ತು 25ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಮುಂದೆ ಮಾರ್ಚ್, ಏಪ್ರಿಲ್, ಮೇ ಸೇರಿದಂತೆ ಎಲ್ಲ ತಿಂಗಳಲ್ಲಿ ಮುಹೂರ್ತ ನೋಡಿಕೊಂಡು ವಿವಾಹ ಪುಣ್ಯಕಾರ್ಯ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಆಯಾ ಜಿಲ್ಲೆಯಲ್ಲಿ ಅವರವರ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ "ಸಪ್ತಪದಿ" ನೆರವೇರಿಸುತ್ತೇವೆ. ಯಾವುದೇ ದೇವಸ್ಥಾನದವರು ಅಥವಾ ಜಿಲ್ಲೆಯವರು ಮುಂದೆ ಬಂದರೆ ಅವರು ಹೇಳಿದ ದಿನಾಂಕದಂದೇ "ಸಪ್ತಪದಿ" ನಡೆಸಲು ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಈ ಸರಳ ವಿವಾಹಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ವಿನಂತಿಸುತೇನೆ ಎಂದರು.
ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸುಮಾರು 206 ಎ ದರ್ಜೆ ದೇವಾಲಯಗಳು ಮತ್ತು ಸುಮಾರು 310 ಬಿ ದರ್ಜೆ ದೇವಾಲಯಗಳು ಇವೆ. ರಾಜ್ಯ ಧಾರ್ಮಿಕ ಪರಿಷತ್‌ನ ಮೂಲಕ ಈಗಾಗಲೇ 80 ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ರಚನೆ ಮಾಡಲು ಅರ್ಜಿ ಕರೆಯಲಾಗಿತ್ತು ಅದರಲ್ಲಿ ಸುಮಾರು 11 ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆಯಾಗಿ ಆಡಳಿತ ಸೇವೆ ನಡೆಸುತ್ತಿದೆ.
ಪೊಲೀಸ್ ವರದಿಗಳು ಬಾಕಿ ಇರುವ ದೇವಾಲಯಗಳು ಮಾತ್ರ ವ್ಯವಸ್ಥಾಪನ ಸಮಿತಿ ರಚನೆಗೆ ಬಾಕಿಯಾಗಿದೆ. ಇಂದಿನ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈಗಾಗಲೇ ಅವಧಿ ಮುಗಿದಿರುವ ದೇವಾಲಯಗಳಿಗೆ ಶೀಘ್ರ ವ್ಯವಸ್ಥಾಪನ ಸಮಿತಿಗೆ ಅರ್ಜಿ ಕರೆಯಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಸಚಿವ ಎಸ್.ಅಂಗಾರ ಅವರನ್ನು ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದರು.
Kshetra Samachara
23/01/2021 12:24 pm