ಮಂಗಳೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಭಟನೆ ನಡೆಸಬೇಕೇ ಹೊರತು ಮಂಗಳೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ಅಗತ್ಯವಿತ್ತೇ? ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ ರೈ, "ಹಿಂದೂ ಹಿತರಕ್ಷಣಾ ಸಮಿತಿ"ಯಿಂದ ಇತ್ತೀಚೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದನ್ನು ಆಕ್ಷೇಪಿಸಿದರು. ಪ್ರತಿಭಟನೆ ನಡೆಸುವ ಮೂಲಕ ದ್ವೇಷವನ್ನು ಬಿತ್ತುವ ಕೆಲಸ ಆಗುತ್ತಿದೆ. ಬಾಂಗ್ಲಾ ದೇಶದಲ್ಲಿ ಆಗುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೇಂದ್ರದ ಮೋದಿ ಸರಕಾರ ಪ್ರತಿಭಟನೆ ಮಾಡಬೇಕು. ಇಲ್ಲದಿದ್ದಲ್ಲಿ ಬಾಂಗ್ಲಾದೇಶದ ದೂತವಾಸದ ಮುಂಭಾಗ ಪ್ರತಿಭಟನೆ ನಡೆಸಬೇಕು. ಈ ರೀತಿಯ ಪ್ರತಿಭಟನೆ ಮಾಡದ ಬಿಜೆಪಿ, ಅದರಲ್ಲೂ ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದೆ ಎಂದರು.
ಅದಾಗ್ಯೂ ಇವರಿಗೆ ಸಾಧನೆ ಮಾಡಬೇಕೆಂದಿದ್ದರೆ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡಬೇಕೆಂದು ಮಂಗಳೂರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಆಗ ಅದಕ್ಕೊಂದು ಅರ್ಥವಿದೆ. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಸರಕಾರ ಅಥವಾ ದ.ಕ.ಜಿಲ್ಲಾಧಿಕಾರಿ ಮಾಡುವಂತದ್ದಲ್ಲ. ಆದ್ದರಿಂದ ಮಂಗಳೂರಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದು ರಮಾನಾಥ ರೈ ಹೇಳಿದರು.
Kshetra Samachara
09/12/2024 08:06 pm