ಸುಬ್ರಹ್ಮಣ್ಯ: ಅಧಿಕಾರಿಗಳ ಎಡವಟ್ಟಿನಿಂದಾಗಿ ಕಡಬ ತಾಲೂಕಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಗೊಂದಲ ಏರ್ಪಟ್ಟ ಘಟನೆ ನಡೆದಿದೆ.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವು ಮತದಾರರ ಹೆಸರು ಇಲ್ಲ ಎನ್ನುವ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯ ಆವರಣದೊಳಗೆ ಬಂದು ಮತಗಟ್ಟೆ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.
ಸ್ಥಳಕ್ಕೆ ಕಡಬ ತಹಸೀಲ್ದಾರ್ ಅನಂತ ಶಂಕರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು. ವಾರ್ಡ್ ವಿಂಗಡಣೆ ಸಂದರ್ಭ ಮತ ಪಟ್ಟಿ ಪರಿಷ್ಕರಣೆ ಮಾಡಿ ಕೆಲವು ಮತದಾರರ ಹೆಸರನ್ನು ಇನ್ನೊಂದು ವಾರ್ಡ್ ಗೆ ಸೇರಿಸಲಾಗಿತ್ತು. ಆದರೆ, ಆ ವಿಚಾರವನ್ನು ಮತದಾರರಿಗೆ ಮನದಟ್ಟು ಮಾಡುವಲ್ಲಿ ಅಧಿಕಾರಿಗಳು ವಿಫಲರಾದದ್ದೇ ಗೊಂದಲಕ್ಕೆ ಕಾರಣವಾಯಿತು. ಘಟನೆಯಿಂದಾಗಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
Kshetra Samachara
27/12/2020 08:11 pm