ಮಂಗಳೂರು: ಕಾಂಗ್ರೆಸ್ ಸಿಬಿಐ ಸಂಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿಯ ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ನಳಿನ್ ಕುಮಾರ್ ಕಟೀಲ್ ಅವರು ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 'ಸಿಬಿಐ ಯಾವುದೇ ದಾಳಿ ಮಾಡುವ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತದೆ. 70 ವರ್ಷ ಆಳಿದ ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ ಎಂದರೆ ಇಷ್ಟು ವರ್ಷ ಸಿಬಿಐ ಅನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಕಾಂಗ್ರೆಸ್ ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ' ಎಂದು ಟಾಂಗ್ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಮೇಲೆ ಈಡಿ, ಐಟಿ ಸ್ವಾಯತ್ತ ಸಂಸ್ಥೆಗಳು ಈಗಾಗಲೇ ತನಿಖೆ ಮಾಡುತ್ತಿದ್ದು, ಅದು ವಿವಿಧ ಹಂತಗಳಲ್ಲಿ ವಿಚಾರಣೆಯಲ್ಲಿದೆ. ಹೀಗಿರುವಾಗ ಸಿಬಿಐ ತನ್ನ ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಕುಮ್ಮಕ್ಕು ನೀಡುತ್ತಿರುವುದು, ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆಗೆ ಬೆಂಬಲ ಇದೆ ಎಂದು ಸಾಬೀತುಪಡಿಸಿದಂತೆ ಆಗಿದೆ. ಡಿಕೆಶಿ ಅಕ್ರಮ ಹಣ ಗಳಿಕೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಪಾಲು ಇದೆ ಎಂದು ತೋರಿಸಿದಂತೆ ಆಗಿದೆ ಎಂದು ಕಿಡಿಕಾರಿದ್ದಾರೆ.
Kshetra Samachara
05/10/2020 05:11 pm