ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಿರುವ ಸ್ಥಳದಲ್ಲಿ ಹಿಂದೆ ದೈವೀಶಕ್ತಿ ಇತ್ತು ಎಂದು ಗೋಚರವಾಗಿದೆ. ಆದ್ದರಿಂದ ಆ ಸ್ಥಳದ ಹಿಂದಿನ ದಾಖಲಾತಿಗಳೆಲ್ಲಾ ಏನಾಗಿವೆ?. ಯಾಕೆ ಈ ಪ್ರದೇಶ ಈಗಿರುವ ಮಸೀದಿ ಕಮಿಟಿಯ ಹೆಸರಿಗೆ ಆಗಿದೆ. ಯಾವಾಗ ಈ ಪ್ರಕ್ರಿಯೆ ಆಗಿದೆ ಎಂಬ ಬಗ್ಗೆ ನೋಡಬೇಕಾಗಿದೆ. ಅಲ್ಲದೆ ವಿಎಚ್ ಪಿ ಈ ಜಾಗವನ್ನು ಸರ್ವೇ ಮಾಡಬೇಕೆಂದು ಬೇಡಿಕೆ ಇಟ್ಟಿದೆ. ಆದ್ದರಿಂದ ಸರ್ವೇ ಮಾಡಿದರೆ ಮಾತ್ರ ಸತ್ಯಾಸತ್ಯತೆ ತಿಳಿಯಲು ಸಾಧ್ಯ. ಇದು ಸತ್ಯಾಸತ್ಯತೆಯನ್ನು ತಿಳಿಯುವ ಪ್ರಯತ್ನ. ಯಾರ ವಿರುದ್ಧದ ಹೋರಾಟವಲ್ಲ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ಮಳಲಿಯಲ್ಲಿ ಇಂದು ಮಾತನಾಡಿದ ಅವರು, ಐತಿಹಾಸಿಕ ಪುಸ್ತಕಗಳಲ್ಲೂ ಇಲ್ಲಿ ಸಾಕಷ್ಟು ದೈವ-ದೇವರುಗಳ ಸಾನಿಧ್ಯ ಇತ್ತು. ಆದರೆ ಇಂದು ಅವುಗಳು ನಮಗೆ ಗೋಚರವಾಗುತ್ತಿಲ್ಲ. ಇದರಲ್ಲಿ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಬೇಡ. ಎರಡು ತಿಂಗಳ ಹಿಂದಿನ ವಿವಾದ ಇದು. ಆಗ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಆದರೆ ರಾಜಕೀಯ ಇದರಲ್ಲಿ ಪ್ರವೇಶ ಆಗಿ ಅಲ್ಲಸಲ್ಲದ ಹೇಳಿಕೆಗಳು ನೀಡಿರುವುದರಿಂದ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇಷ್ಟರವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ಇಷ್ಟರವರೆಗೆ ಆಗಿಲ್ಲ. ಎಲ್ಲರೂ ಶಾಂತಿಯಿಂದ ಇದ್ದು, ಮುಂದೆಯೂ ಅದೇ ರೀತಿಯಲ್ಲಿ ಕಾಪಾಡುವ ಅವಶ್ಯಕತೆ ಇದೆ. ಚುನಾವಣೆಗಾಗಿ ಈ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮಸೀದಿಯಲ್ಲಿ ದೇವಾಲಯದ ಶೈಲಿಯ ಕಟ್ಟಡ ಕಂಡು ಬಂದಾಗ ಖಂಡಿತಾ ಆ ಬಗ್ಗೆ ಪ್ರಶ್ನೆಗಳು ಬಂದೇ ಬರುತ್ತದೆ ಎಂದರು.
ಮಾಜಿ ಸಿಎಂ ಕುಮಾರ ಸ್ವಾಮಿ ಹಿರಿಯರು. ಅವದು ತಾಂಬೂಲ ಪ್ರಶ್ನೆಯಲ್ಲ, ದೊಡ್ಡ ದೊಡ್ಡ ಯಾಗಗಳನ್ನು ಮಾಡುವ ವ್ಯವಸ್ಥೆ ಅವರಲ್ಲಿದೆ. ಯಾರು ಕೇರಳಕ್ಕೆ ಹೋಗಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಕೇಶವ ಕೃಪವೇ ಮತ್ತೊಂದು ಎಂದು ಹೇಳಬಾರದು. ಅವರು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಒಳ್ಳೆಯದು. ಈಗಲೂ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಈ ಗೊಂದಲದ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್ ಅನ್ನು ಮುಂದೆ ಇಟ್ಟುಕೊಂಡು ಮಾತುಕತೆ ಶುರುಮಾಡಿದಾಗ ಈ ಗೊಂದಲ ಸೃಷ್ಟಿಯಾಗಿದೆ ಎಂದು ಡಾ.ವೈ.ಭರತ್ ಶೆಟ್ಟಿ ಹೇಳಿದರು.
Kshetra Samachara
25/05/2022 04:11 pm