ಬಂಟ್ವಾಳ ಶಾಸಕ ನಾಯ್ಕ್ ಅವರು ಗ್ರಾ.ಪಂ ಪ್ರತಿನಿಧಿಯೊಬ್ಬರ ಜತೆ ಉದ್ಧಟತನದಿಂದ ಮಾತನಾಡಿದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ. ಸರ್ಕಾರದ ಸೌಲಭ್ಯವನ್ನು ಬೇಕಾದರೆ ತಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ಶಾಸಕರು ಹೇಳಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮ ಪಂಚಾಯತ್ ಪ್ರತಿನಿಧಿ ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ನಡುವೆ ಮಾತಿನ ಚಕಮಕಿ ವೇಳೆ ಶಾಸಕ ರಾಜೇಶ್ ನಾಯ್ಕ್ ಮಾತನಾಡಿದ ವಿಡಿಯೋ ದೊರೆತಿದೆ. ಎರಡು ಗ್ರಾ.ಪಂ.ಗಳಿಗೆ ಸಾಂಕೇತಿಕವಾಗಿ ಸ್ವಚ್ಛ ವಾಹಿನಿ ವಾಹನದ ಕೀ ಹಸ್ತಾಂತರ ಕಾರ್ಯಕ್ರಮ ಕೆಪಿಟಿ ಮೈದಾನದಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಸಾಂಕೇತಿಕವಾಗಿ ಕಿ ಹಸ್ತಾಂತರಿಸಿದ ಈಶ್ವರಪ್ಪ ತರಾತುರಿಯಲ್ಲಿ ತಮ್ಮ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಸ್ಥಳದಿಂದ ತೆರಳುತ್ತಿದ್ದಂತೆ ಕೆಲ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಅಸಮಾಧಾನ ತೋಡಿಕೊಂಡರು. ಆಗ ಕಡಬ ತಾಲ್ಲೂಕಿನ ಪ್ರತಿನಿಧಿಯೊಬ್ಬರು ಮಾತನಾಡಿ, ತಮ್ಮ ಕೆಲಸಗಳನ್ನು ಬದಿಗಿಟ್ಟು ದೂರದ ಊರಿನಿಂದ ಬಂದರೂ ಸಚಿವರು ಕೀಲಿಕೈ ಹಸ್ತಾಂತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಆಗ ಶಾಸಕ ರಾಜೇಶ್ ನಾಯ್ಕ್ ಕೀ ವಿತರಿಸಲು ಮುಂದಾದರು. ಇದನ್ನು ವಿರೋಧಿಸಿದ ಗ್ರಾಪಂ ಪ್ರತಿನಿಧಿ ಕೀ ಸ್ವೀಕರಿಸದೆ ಸಚಿವರಿಗೆ ಕೀಲಿಕೈ ಕೊಡುವಂತೆ ಒತ್ತಾಯಿಸಿದರು. ಇದರಿಂದ ಸಿಟ್ಟಿಗೆದ್ದ ರಾಜೇಶ್ ನಾಯ್ಕ್, ಎಲ್ಲರೂ ಕೀಲಿಕೈಯನ್ನು ಸ್ವೀಕರಿಸಿರುವಾಗ ನಿಮಗೆ ಸ್ವೀಕರಿಸಲು ಏಕೆ ಸಾಧ್ಯವಿಲ್ಲ? ಬೇಕಾದರೆ ತಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ಹರಿಹಾಯ್ದರು.
ಶಾಸಕರ ವರ್ತನೆಗೆ ಅಲ್ಲಿದ್ದ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
04/04/2022 06:10 pm