ಬಂಟ್ವಾಳ : ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಸೆ. 24ರಿಂದ ಮುಷ್ಕರ ನಡೆಯುತ್ತಿದ್ದು, ಆದರೆ ಸರಕಾರ ಇನ್ನೂ ನಮ್ಮ ಬೇಡಿಕೆಯ ಕುರಿತು ಗಮನ ಹರಿಸಿಲ್ಲ.
ಹೀಗಾಗಿ ಈ ವಿಚಾರ ಸರಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವಂತೆ ಬಂಟ್ವಾಳ ತಾಲೂಕಿನ ನೌಕರರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದರು.
ಒಳ ಮತ್ತು ಹೊರ ರೋಗಿಗಳ ತಪಾಸಣೆ, ಮಲೇರಿಯಾ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ಗುತ್ತಿಗೆ, ಹೊರಗುತ್ತಿಗೆ ಸಿಬಂದಿಯವರೇ ಹೆಚ್ಚಿದ್ದಾರೆ.
ಆದರೆ, ಸರಕಾರ ನಮ್ಮ ಬೇಡಿಕೆ ಈಡೇರಿಕೆಯ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರತಿಭಟನೆಯಿಂದಾಗಿ ಕೋವಿಡ್ ತಪಾಸಣೆ, ಕಾಲ್ ಸೆಂಟರ್ ಗಳು, ಕೋವಿಡ್ ವರದಿ, ಲಸಿಕೆ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ, ಅಂಧತ್ವ ಕಾರ್ಯಕ್ರಮ ಮೊದಲಾದ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
ಹೀಗಾಗಿ ಬೇಡಿಕೆ ಈಡೇರಿಸಲು ಒತ್ತಡ ಹೇರುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ನೀಡುವ ವೇಳೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ. ಪ್ರಕಾಶ್ ಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಪಿ., ಇತರ ನೌಕರರು ಉಪಸ್ಥಿತರಿದ್ದರು.
Kshetra Samachara
29/09/2020 04:36 pm