ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ನಾಗಸ್ವರ ವಾದನಕ್ಕೆ ತಲೆದೂಗದವರಿಲ್ಲ!: ಅರಸಿ ಬಂದ ಪ್ರಶಸ್ತಿ ಪುರಸ್ಕಾರಕ್ಕೆ ಲೆಕ್ಕವಿಲ್ಲ

ಮುಲ್ಕಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಲಿಂಗಪ್ಪ ಶೇರಿಗಾರ್ 40 ವರ್ಷಗಳಿಂದಲೂ ಕಟೀಲು ದೇವಸ್ಥಾನದಲ್ಲಿ ನಾಗಸ್ವರ ವಾದಕರಾಗಿ ಪ್ರಸಿದ್ಧರು.

ಖ್ಯಾತ ನಾಗಸ್ವರ ವಾದಕರಾದ ದಿ.ವಾಸು ಶೇರಿಗಾರ್ ಅವರ ಪುತ್ರ ಲಿಂಗಪ್ಪ ಶೇರಿಗಾರ್, 2007ರಲ್ಲಿ ನಡೆದ ಕಟೀಲು ಬ್ರಹ್ಮಕಲಶೋತ್ಸವ ಸಂದರ್ಭ ಸಾರ್ವಜನಿಕ ಸನ್ಮಾನ ಪಡೆದಿದ್ದರು. ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ನಾಗಸ್ವರ ಕಛೇರಿ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಸಂದರ್ಭ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಲಿಮಾರು ಮಠಾಧೀಶರಿಂದ ನಾಗಸ್ವರ ವಿಶಾರದ ಪ್ರಶಸ್ತಿ ಪಡೆದಿದ್ದಾರೆ. ಶ್ರೀ ಕ್ಷೇತ್ರ ಕಟೀಲಿಗೆ ಭೇಟಿ ನೀಡಿರುವ ಶ್ರೀ ಶ್ರೀ ಕಂಚಿ ಕಾಮಕೋಟಿ ಮಠಾಧೀಶರು ಇವರ ನಾಗಸ್ವರ ಮೆಚ್ಚಿ ಬಂಗಾರದ ಪದಕ ನೀಡಿದ್ದರು. ಪ್ರತಿವರ್ಷ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಾಗಸ್ವರ ಕಚೇರಿ ನಡೆಸಿಕೊಟ್ಟು ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣದ ಶ್ರೀ ಆಂಜನೇಯ ದೇವಸ್ಥಾನ, ತಮಿಳುನಾಡಿನ ಮಧುರೈ, ನಾಗರಕೋಯಿಲ್ ಮೊದಲಾದೆಡೆ ನಾಗಸ್ವರ ವಾದನ ಕಛೇರಿ ನೀಡಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕಾಸರಗೋಡಿನ ಎಡನೀರು ಮಠದಲ್ಲಿ ಪ್ರಾಯೋಜಿಸಿದ್ದ ಸಂಗೀತ ಗೋಷ್ಠಿಯಲ್ಲಿ ನಾಗಸ್ವರ ಕಛೇರಿ ನಡೆಸಿ ಸಂಗೀತ ವಿದ್ವಾಂಸರಿಂದ ಮೆಚ್ಚುಗೆ ಗಳಿಸಿದ್ದಾರೆ. ಮಂಗಳೂರಿನ ಹಲವೆಡೆ ಸಂಗೀತ ಕಛೇರಿ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಕಟೀಲು ಪ್ರಾಥಮಿಕ ಶಾಲೆಯ ನೂರನೇ ವರ್ಷದ ಸಂದರ್ಭ ಸಾರ್ವಜನಿಕ ಸನ್ಮಾನಕ್ಕೆ ಪಾತ್ರರಾಗಿದ್ದರು. ಕಟೀಲಿನಲ್ಲಿ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ವಿದ್ವತ್ ಸನ್ಮಾನ ಪಡೆದಿದ್ದಾರೆ. 2007ರಲ್ಲಿ ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ನಾಗಸ್ವರ ವಿಶೇಷ ವಾದನಕ್ಕೆ ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಕಾಶವಾಣಿಯ ಗ್ರೇಡ್ ಕಲಾವಿದರಾಗಿದ್ದು, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

28/10/2020 08:46 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ