ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ದೇವಾಲಯ ರಸ್ತೆಯಲ್ಲಿ ಇತ್ತೀಚೆಗಷ್ಟೇ ಅಳವಡಿಸಿದ ಹೈಟೆನ್ಶನ್ ವಿದ್ಯುತ್ ಕಂಬವೊಂದು ಜಡಿ ಮಳೆಗೆ ವಾಲಿ ನಿಂತಿದ್ದು, ಇನ್ನೇನು ಧರಾಶಹಿಯಾಗುವ ಆತಂಕ ಎದುರಿಸುತ್ತಿದೆ. ದೇಗುಲ ದ್ವಾರಕ್ಕೆ ತಾಗಿಕೊಂಡಂತೆಯೇ ಇರುವ ಹೈಟೆನ್ಶನ್ ವಿದ್ಯುತ್ ಕಂಬ ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಇನ್ನೇನು ಕುಸಿದು ಬೀಳುವ ಸ್ಥಿತಿ ತಲುಪಿದೆ.
ಮುಲ್ಕಿಯಿಂದ ಎಳತ್ತೂರು ಪಡ್ಲಕೆರೆವರೆಗೆ ನಿರ್ಮಾಣವಾಗುತ್ತಿರುವ ಐಡಿಯಲ್ ಕಂಪೆನಿಗಾಗಿ 33 ಕೆ.ವಿ. ವಿದ್ಯುತ್ ಸರಬರಾಜಿನ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಕೆಗೆ ಆರಂಭದಲ್ಲೇ ಗ್ರಾಮಸ್ಥರು ವಿರೋಧಿಸಿದ್ದರು. ಆದರೆ, ಆ ಬಳಿಕ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಗ್ರಾಮಸ್ಥರು ಷರತ್ತುಬದ್ಧ ಒಪ್ಪಿಗೆ ನೀಡಿದ್ದರು.
ಕಾಮಗಾರಿ ಹಂತದಲ್ಲೇ ಹೈಟೆನ್ಶನ್ ಕಂಬ ಧರೆಗೆ ಬೀಳುವ ಭೀತಿ ಸೃಷ್ಟಿಸಿದ್ದು, ಒಂದು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ಇದೇ ಪರಿಸ್ಥಿತಿ ಎದುರಾದರೆ ಆಗಬಹುದಾದ ಅನಾಹುತಕ್ಕೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜತೆಗೆ ಮೆಸ್ಕಾಂ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
Kshetra Samachara
07/01/2021 09:26 pm