ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಾಗುವ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರದ ಹಣವನ್ನು ವಿಳಂಬ ಮಾಡದೆ ನೀಡಬೇಕು. ಪ್ರಕರಣಗಳ ತನಿಖೆಗೆ ಚುರುಕು ಮುಟ್ಟಿಸಿ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ 1989) ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ಜನವರಿಯಿಂದ ಈ ವರೆಗೆ 51 ದೌರ್ಜನ್ಯ ಪ್ರಕರಣಗಳಾಗಿದ್ದು, 33 ಪ್ರಕರಣಗಳಲ್ಲಿ 27.53 ಲಕ್ಷ ರೂ.ನಷ್ಟು ಪರಿಹಾರದ ಹಣ ನೀಡಲಾಗಿದೆ. ಉಳಿದ 14 ಪ್ರಕರಣಗಳಿಗೆ ಸಂಬಂಧಿಸಿ ಶೀಘ್ರ ಪರಿಹಾರ ನೀಡುವುದರ ಜೊತೆಗೆ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನುಗಳ ಬಗ್ಗೆ ನಿಖರ ಮಾಹಿತಿ ಕ್ರೋಡೀಕರಿಸಬೇಕು. ಅವುಗಳಲ್ಲಿ ಅತಿಕ್ರಮಣವಾಗಿರುವುದನ್ನು ಪತ್ತೆ ಹಚ್ಚಿ, ಸರಕಾರ ಸ್ವಾಧೀನ ಪಡಿಸಿಕೊಳ್ಳಬೇಕು. ಜಮೀನಿನಲ್ಲಿ ನಿವೇಶನಗಳಾಗಿ ಪರಿವರ್ತಿಸಿ ಶೋಷಿತರು ಹಾಗೂ ನೊಂದವರಿಗೆ ಆದ್ಯತೆ ಮೇಲೆ ನೀಡಬೇಕು. ಡಿಸಿ ಮನ್ನಾ ಜಾಗದಲ್ಲಿ ಅಕ್ರಮ ಅತಿಕ್ರಮಣ ಮಾಡಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಮುಂದಾದಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪ್ರಾಧಿಕಾರದವರು ಪರವಾನಿಗೆ ನೀಡಬಾರದು. ಅದನ್ನೂ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತಹ ಕಟ್ಟಡಕ್ಕೆ ವಿದ್ಯುಚ್ಛಕ್ತಿ, ನೀರಿನ ಸೌಲಭ್ಯ ಹಾಗೂ ಟ್ರೇಡ್ ಲೈಸೆನ್ಸ್ ನೀಡಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತಿ ಪ್ರಮಾಣ ಪತ್ರವನ್ನು ಕೆಲವು ಪ್ರಕರಣಗಳಲ್ಲಿ ನೀಡುತ್ತಿಲ್ಲ ಎಂದು ಮಾತು ಕೇಳಿಬರುತ್ತಿದೆ. ನಿಖರ ದಾಖಲೆ ಇಲ್ಲವಾದ್ದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ, ಮಹಜರು ಹಾಗೂ ಅವರ ಆಚಾರ-ವಿಚಾರ ಮತ್ತು ಸಂಪ್ರದಾಯಗಳ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಪ್ರಮಾಣ ಪತ್ರ ನೀಡಬೇಕೆಂದು ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಡಿಸಿಪಿ ಹರಿರಾಮ್ ಶಂಕರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/02/2021 03:27 pm