ಬಂಟ್ವಾಳ: ಒಂದೇ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ದೂರುಗಳು ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಪ್ರಕರಣವೊಂದನ್ನು ಭೇದಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿ.ಮೂಡ ಗ್ರಾಮದ ತಾಳಿಪಡ್ಪು ಮಸೀದಿಯ ಕಳವು ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಳಿಪಡ್ಪು ನಿವಾಸಿ ಮಹಮ್ಮದ್ ಆಶೀಫ್(26) ಬಂಧಿತ ಆರೋಪಿಯಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈತ ಮಸೀದಿಯ ಹಳೆಯ ತಾಮ್ರದ ಹಂಡೆ ಹಾಗೂ ಕೇಬಲ್ ಕಳವು ಮಾಡಿರುವ ಕುರಿತು ಹಿದಾಯುತ್ತುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷ ಸೈಯದ್ ಪಲೂಲ್ ಪೊಲೀಸರಿಗೆ ದೂರು ನೀಡಿದ್ದರು.
ಬಂಟ್ವಾಳ ನಗರ ಠಾಣೆಗೆ ಹೊಸದಾಗಿ ಬಂದ ಇನ್ಸ್ ಪೆಕ್ಟರ್ ಚೆಲುವರಾಜು ಅವರ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಅವಿನಾಶ್, ಕಲೈಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜತೆಗೆ ಕಳವು ನಡೆಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುತೂಹಲವೆಂಬಂತೆ ಬಂಧಿತ ಆರೋಪಿ ಮಹಮ್ಮದ್ ಆಶೀಫ್ ಕೂಡ ಹಸೈನಾರ್ ಹಾಗೂ ಇತರರ ವಿರುದ್ಧ ಹಲ್ಲೆಯ ಆರೋಪ ಹೊರಿಸಿ ದೂರು ನೀಡಿದ್ದ. ತಾನು ತಾಳಿಪಡ್ಪಿನಲ್ಲಿ 2 ವರ್ಷಗಳಿಂದ ಲೀಸ್ ಗೆ ಮನೆ ಪಡೆದು ವಾಸಿಸುತ್ತಿದ್ದೇನೆ. ಆದರೆ, ಮನೆಯವರು ತನ್ನ ಹಣ ನೀಡದೇ ಇರುವುದರಿಂದ ಅಲ್ಲಿಂದ ಎದ್ದಿರಲಿಲ್ಲ. ಇದನ್ನು ಸಹಿಸದೆ ತನ್ನ ವಿರುದ್ಧ ಮಸೀದಿಯಲ್ಲಿ ಕಳವು ನಡೆಸಿದ ಆರೋಪ ಹೊರಿಸಿ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದಾನೆ.
Kshetra Samachara
24/02/2021 10:06 pm